ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಚಿತ್ರದ ಟೀಸರ್ ಬಿಡುಗಡೆ; ಕ್ಷಾಮದ ನಡುವೆ ಬ್ರಿಟಿಷ್ ಆಡಳಿತದ ವಿರುದ್ಧ ಸೆಟೆದೆದ್ದ ಯುವಕನ ಕತೆ!
Photo Credit : imdb.com
ಟೀಸರ್ನಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಅವರ ಸಣ್ಣ ಝಲಕ್ ತೋರಿಸಲಾಗಿದೆ
ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ‘ರಣಬಾಲಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಭಾರತೀಯ ಇತಿಹಾಸದ ಪ್ರಬಲ ಅಧ್ಯಾಯವನ್ನು ಸಿನಿಮಾ ಬೆಳ್ಳಿತೆರೆಯ ಮೇಲೆ ತರಲಿದೆ.
ಸೆಪ್ಟೆಂಬರ್ 11ರಂದು ಚಿತ್ರಮಂದಿರಗಳಲ್ಲಿ ಬರಬೇಕಿದ್ದ ‘ರಣಬಾಲಿ’ಯ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಇದೀಗ ಅಕ್ಟೋಬರ್ 16ರಂದು ಬಿಡುಗಡೆ ದಿನಾಂಕ ನಿಗದಿಪಡಿಸಲಾಗಿದೆ.
1876-1878ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಸಂದರ್ಭದ ಮಹಾ ಭಾರತೀಯ ಕ್ಷಾಮದ ವಿನಾಶಕಾರಿ ಪರಿಣಾಮದ ಚಿತ್ರಣವನ್ನು ಸಿನಿಮಾ ತೋರಿಸಲಿದೆ.
ನೈಜ ಕತೆಯನ್ನು ಹೆಣೆದ ಸಿನಿಮಾ
ತೀವ್ರ ಬರದಿಂದ ಅದಾಗಲೇ ಕೃಷಿ ಉತ್ಪಾದನೆ ಕಡಿಮೆಯಾಗಿದ್ದವು. ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ರೈತರು ಬೆಳೆ ವೈಫಲ್ಯ ಮತ್ತು ನೀರಿನ ಕೊರತೆಯಿಂದ ಆಹಾರವಿಲ್ಲದೆ ನರಳುತ್ತಿದ್ದಾಗ, ಬ್ರಿಟಿಷ್ ಆಳ್ವಿಕೆಯಲ್ಲಿ ಜಾರಿಗೆ ತಂದ ನೀತಿಗಳಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ವ್ಯಾಪಕ ಹಸಿವೆಯ ಹೊರತಾಗಿಯೂ ಭಾರತದಿಂದ ಸಾಮ್ರಾಜ್ಯದ ಇತರ ಭಾಗಗಳಿಗೆ ಧಾನ್ಯ ರಫ್ತು ಮುಂದುವರಿದಿತ್ತು. ಐತಿಹಾಸಿಕ ಅಂದಾಜಿನ ಪ್ರಕಾರ ರಾಯಲಸೀಮಾ ಪ್ರದೇಶದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮಂದಿ ಕ್ಷಾಮದ ಸಮಯದಲ್ಲಿ ಸಾವನ್ನಪ್ಪಿದ್ದರು.
ಸಿನಿಮಾ ಕ್ಷಾಮದ ವಿನಾಶಕಾರಿ ಪರಿಣಾಮಗಳ ಮೇಲೆ ಗಮನ ಕೇಂದ್ರೀಕರಿಸಿದರೂ, ವಿಜಯ್ ದೇವರಕೊಂಡ ಅವರ ಪಾತ್ರವು ಬ್ರಿಟಿಷ್ ಆಳ್ವಿಕೆ ವಿರೋಧಿಸಿದ ನಿಜವಾದ ಐತಿಹಾಸಿಕ ವ್ಯಕ್ತಿಯಿಂದ ಪ್ರೇರಿತವಾಗಿದೆ. ಆ ಸಂದರ್ಭದಲ್ಲಿ ಅನೇಕರು ಬ್ರಿಟಿಷ್ ಆಡಳಿತದ ವಿರುದ್ಧ ಬಂಡಾಯ ಎದ್ದರು. ಬ್ರಿಟಿಷ್ ಅಧಿಕಾರಿಗಳು ಅವರನ್ನು ಅಪರಾಧಿಗಳೆಂದು ಪರಿಗಣಿಸುತ್ತಿದ್ದರು. ಕಠಿಣ ಸಮಯದಲ್ಲಿ ಘನತೆಗಾಗಿ ಹೋರಾಡುವ ಜನಸಾಮಾನ್ಯರ ಭಾವನಾತ್ಮಕ ಸಂಘರ್ಷವನ್ನು ಸಹ ಚಲನಚಿತ್ರ ಬಿಂಬಿಸುತ್ತದೆ.
‘ಶ್ಯಾಮ್ ಸಿಂಘಾ ರಾಯ್’ ಖ್ಯಾತಿಯ ನಿರ್ದೇಶಕ ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಈ ಸಿನಿಮಾದ 2 ನಿಮಿಷ 32 ಸೆಕೆಂಡ್ಗಳ ಅವಧಿಯ ಟೀಸರ್ನಲ್ಲಿ ವಿಜಯ್ ದೇವರಕೊಂಡ ಪಾತ್ರವನ್ನು ಹಿಂಸಾತ್ಮಕ ಮತ್ತು ಧೈರ್ಯಶಾಲಿ ಯೋಧನಂತೆ ಪರಿಚಯಿಸಲಾಗಿದೆ. ಸಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡುವ ಯೋಧನ ಪಾತ್ರಕ್ಕಾಗಿ ವಿಜಯ್ ಅವರ ಲುಕ್ ಸಂಪೂರ್ಣ ಬದಲಾಗಿದ್ದು, ಟೀಸರ್ನಲ್ಲಿ ಆಕ್ಷನ್ ದೃಶ್ಯಗಳು ಗಮನ ಸೆಳೆಯುತ್ತವೆ.
ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆ. ‘ದಿ ಮಮ್ಮಿ’ ಸಿನಿಮಾದ ಮೂಲಕ ಪರಿಚಿತರಾಗಿರುವ ಅವರು ಬ್ರಿಟಿಷ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ನಾಯಕಿ ರಶ್ಮಿಕಾ ಮಂದಣ್ಣ ಟೀಸರ್ನಲ್ಲಿ ಕೆಲವೇ ಕ್ಷಣಗಳ ಕಾಲ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಟೀಸರ್ನ ಕೊನೆಯ ಭಾಗದಲ್ಲಿ ನೀಡಿರುವ ದೃಶ್ಯಗಳು ರಣಬಾಲಿಯ ಕತೆಯ ದೊಡ್ಡ ತಿರುವು ಇರುವ ಕುತೂಹಲ ಮೂಡಿದೆ.