ಚಿತ್ರ: ವಿಸ್ಮಯ ಮೋಹನ್

ಲಾಲ್ಸ್ ತುಡಕ್ಕಂ

ನಿರ್ದೇಶನ: ಜ್ಯೂಡ್ ಆ್ಯಂಟನಿ ಜೋಸೆಫ್

ನಿರ್ಮಾಣ: ಆಂಟೋನಿ ಪೆರುಮ್ಬಾವೂರ್

ತಾರಾಗಣ: ವಿಸ್ಮಯ ಮೋಹನ್ ಲಾಲ್, ಆಶಿಷ್ ಜಿಯೋ ಆ್ಯಂಟನಿ, ಮೋಹನ್ ಲಾಲ್ ಮೊದಲಾದವರು.

ತಮ್ಮ ನಿಜವಾದ ಹೆಸರಲ್ಲೇ ಸಿನೆಮಾ ಮಾಡುವ ಅವಕಾಶ ಕಡಿಮೆ ಮಂದಿಗೆ ಮಾತ್ರ ಲಭಿಸುತ್ತದೆ. ಆದರೆ ಮೋಹನ್ ಲಾಲ್ ಪುತ್ರಿ ಮೊದಲ ಚಿತ್ರದಲ್ಲೇ ಆ ಅವಕಾಶ ಪಡೆದುಕೊಂಡಿದ್ದಾರೆ. ತುಡಕ್ಕಂ ಎನ್ನುವ ಹೆಸರಲ್ಲಿ ಜನಪ್ರಿಯವಾದ ಈ ಚಿತ್ರದ ಅಧಿಕೃತ ಹೆಸರು ‘ವಿಸ್ಮಯ ಮೋಹನ್ ಲಾಲ್ಸ್ ತುಡಕ್ಕಂ’. ಮಲಯಾಳಂನಲ್ಲಿ ತುಡಕ್ಕಂ ಎಂದರೆ ಆರಂಭ ಎಂದು ಅರ್ಥ.

ಮೋಹನ್ ಲಾಲ್ ಪುತ್ರಿಯ ಚಿತ್ರ ಬದುಕಿನ ಆರಂಭ ಇದು. ಈ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ಅತಿಥಿ ಪಾತ್ರವಾಗಿ ಕಾಣಿಸಿದ್ದಾರೆ. ಈ ಎರಡು ಅಂಶದ ಹೊರತು ನಿಜವಾದ ಈ ತಾರಾ ಕುಟುಂಬಕ್ಕೂ ಚಿತ್ರದ ಕಥೆಗೂ ಅಂಥ ಸಂಬಂಧಗಳೇನಿಲ್ಲ.

ಚಿತ್ರದಲ್ಲಿ ವಿಸ್ಮಯ ನಿರ್ವಹಿಸಿರುವ ಪಾತ್ರದ ಹೆಸರು ಮೀನು. ಈಕೆಯ ತಾಯಿಯ ಪಾತ್ರವನ್ನು ‘ಜನುಮದ ಜೋಡಿ’ ಖ್ಯಾತಿಯ ಶಿಲ್ಪಾ ನಿರ್ವಹಿಸಿದ್ದಾರೆ. ಆದರೆ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಮೀನು ತಂದೆಯ ವಾತ್ಸಲ್ಯದಲ್ಲಿ ಬೆಳೆದಿರುತ್ತಾಳೆ. ತಂದೆಯಾಗಿ ಮಲಯಾಳಂನ ಖ್ಯಾತ ನಟ ಸಾಯಿಕುಮಾರ್ ಅಭಿನಯಿಸಿದ್ದಾರೆ. ತಂದೆಗೆ ಸರಕಾರಿ ವೃತ್ತಿ ಇದ್ದರೂ ದೈಹಿಕವಾಗಿ ವಿಶೇಷ ಚೇತನವಾಗಿರುವಂಥ ವ್ಯಕ್ತಿ. ಇಂಥ ಮನೆಯ ಹುಡುಗಿಯ ಹಿಂದೆ ಒಬ್ಬ ಸೈಕೋ ಕಿಲ್ಲರ್ ಬಿದ್ದರೆ ಆಕೆ ಅದನ್ನು ಯಾವ ರೀತಿ ಎದುರಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ.

ನಾಯಕಿ ಪ್ರಧಾನ ಚಿತ್ರಗಳು ಸಾಮಾನ್ಯವಾಗಿ ಭಾವನಾತ್ಮಕ ವಾಗಿರುತ್ತವೆ. ಮೊದಲ ಚಿತ್ರದಲ್ಲೇ ಆಕ್ಷನ್ ಕ್ವೀನ್ ಆಗಿ ಎಂಟ್ರಿ ನೀಡುವವರು ಅಪರೂಪ. ಅಂಥದೊಂದು ಪಾತ್ರ ವಿಸ್ಮಯಾಗೆ ದೊರಕಿದೆ. ಹಾಗಂತ ಸಾಹಸಕ್ಕಾಗಿಯೇ ಸೃಷ್ಟಿಸಲ್ಪಟ್ಟ ಪಾತ್ರವೇನಲ್ಲ. ಕಥೆಯಲ್ಲಿ ಸಾಂದರ್ಭಿಕವಾಗಿರುವಂಥ ಹೊಡೆದಾಟಗಳಿವೆ.

ಇಲ್ಲಿ ಮೀನು ಪಾತ್ರ ಸಮರ ಕಲೆಯನ್ನು ಕಲಿತ ಸುಂದರಿ. ಹೀಗಾಗಿ ಸಮಸ್ಯೆಯ ವಿರುದ್ಧ ನೇರವಾಗಿ ಹೊಡೆದಾಡುತ್ತಾಳೆ. ವಿಸ್ಮಯ ಮೋಹನ್ ಲಾಲ್ ಸ್ವತಃ ಮಾರ್ಶಲ್ ಆರ್ಟ್ಸ್ ನಲ್ಲಿ ಪರಿಣತಿ ಪಡೆದಿರುವ ಕಾರಣ, ಸಾಹಸ ದೃಶ್ಯಗಳನ್ನು ಆಕರ್ಷಕವಾಗಿ ಕಾಣಿಸಿದ್ದಾರೆ. ಸಾಹಸವನ್ನು ಚಿತ್ರೀಕರಿಸಿರುವ ರೀತಿ ಮತ್ತು ಹಿನ್ನೆಲೆ ಸಂಗೀತ ಕೂಡ ದೃಶ್ಯಗಳು ಮನಗೆಲ್ಲುವಂತೆ ಮಾಡಲು ಕಾರಣವಾಗುತ್ತವೆ. ಅತಿಥಿ ಪಾತ್ರದಲ್ಲಿ ಮೋಹನ್ ಲಾಲ್ ಬರುವ ದೃಶ್ಯಗಳಂತೂ ಅಭಿಮಾನಿಗಳ ಪಾಲಿಗೆ ಹಬ್ಬ ಎಂದೇ ಹೇಳಬಹುದು.

ಸ್ಟಾರ್ ಪುತ್ರಿಯ ಆಗಮನ ಎನ್ನುವುದಕ್ಕಿಂತ ಒಂದೊಳ್ಳೆಯ ಸಂದೇಶವನ್ನಿಟ್ಟುಕೊಂಡೇ ಚಿತ್ರ ಮಾಡಿರುವುದು ಅಭಿನಂದನೀಯ. ಈ ಕಾಲದಲ್ಲಿ ಕೂಡ ಹೆಣ್ಣು ತನ್ನ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು ಎಷ್ಟೊಂದು ಕಷ್ಟ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪುರುಷ ಪ್ರಧಾನ ಸಮಾಜ ಹೇಗೆ ಹೆಣ್ಣಿನ ಬಗ್ಗೆ ತನ್ನ ಸಾಮೂಹಿಕ ಅಸಹನೆ ಪ್ರದರ್ಶಿಸುತ್ತದೆ? ಹೇಗೆ ಭಾವನಾತ್ಮಕವಾಗಿ ಹೆಣ್ಣನ್ನು ಒಂಟಿಯಾಗಿಸುತ್ತದೆ? ಎನ್ನುವುದನ್ನು ಇಲ್ಲಿ ತೆರೆದಿಡಲಾಗಿದೆ.

ಮೋಹನ್ ಲಾಲ್ ಪುತ್ರಿ ಹೇಗೆ ನಟಿಸಬಹುದು ಎನ್ನುವ ಭಾರೀ ನಿರೀಕ್ಷೆಗೆ ನಿರ್ದೇಶಕರು ಸರಳವಾದ ಪರಿಹಾರ ಕಂಡಿದ್ದಾರೆ. ತಂದೆಯಂತೆ ಆ್ಯಕ್ಷನ್ ಮಾಡಬಲ್ಲಳು ಎನ್ನುವ ಪಾತ್ರವನ್ನು ನೀಡುತ್ತಲೇ, ಭಾವುಕ ದೃಶ್ಯಗಳನ್ನು ಕಥೆಯೊಂದಿಗೆ ಬೆಸೆದಿದ್ದಾರೆ. ಮೀನು ಪಾತ್ರದ ಗೆಲುವಿನಲ್ಲಿ ಕಂಠದಾನ ಕಲಾವಿದೆಗೂ ಪಾಲು ಸಂದಾಯವಾಗುತ್ತದೆ. ನಾಯಕಿಯ ನಟನೆಯ ಜೊತೆಗೆ ಈ ಚಿತ್ರದಲ್ಲಿ ಅಚ್ಚರಿ ನೀಡಿದ ಇನ್ನೊಬ್ಬ ಪಾತ್ರಧಾರಿ ಆಶಿಷ್ ಜಿಯೋ ಆ್ಯಂಟನಿ. ಚಿತ್ರದ ನಿರ್ಮಾಪಕ ಆ್ಯಂಟನಿ ಪೆರುಂಬಾವೂರ್ ಪುತ್ರನಾಗಿರುವ ಆಶಿಷ್ ಸೈಕೋ ಕಿಲ್ಲರ್ ಆಗಿ ಕಾಣಿಸಿದ್ದಾರೆ. ರಾಜಮೌಳಿ ಚಿತ್ರಗಳಲ್ಲಿನ ಖಳನಂತೆ ತಣ್ಣನೆಯ ಕ್ರೌಯದಿಂದ ಬೆಚ್ಚಿ ಬೀಳಿಸುತ್ತಾರೆ. ಸಂಭಾಷಣೆಯೇ ಇರದಿದ್ದರೂ ಆಶಿಷ್ ನಟನೆಯ ಪ್ರತಿಭೆ ಬಗ್ಗೆ ಸಂದೇಹವೇ ಬೇಕಾಗಿಲ್ಲ.

ತುಡಕ್ಕಂ ವಿಸ್ಮಯ ಪಾಲಿಗೆ ಒಂದೊಳ್ಳೆಯ ಆರಂಭವನ್ನೇ ನೀಡಿದೆ. ಮಾತ್ರವಲ್ಲ ಮಲಯಾಳಂ ಚಿತ್ರರಂಗದಲ್ಲೂ 2026ರ ದ್ವಿತೀಯಾರ್ಧವನ್ನು ಯಶಸ್ಸಿನೊಂದಿಗೆ ಮುನ್ನಡೆಸುವಂತೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor