Photo Credit : X@Sun Pictures

DC ನೂರು ಕೋಟಿ ಗಳಿಸಿದ ಯಶಸ್ಸಿನ ಹಿನ್ನೆಲೆಯಲ್ಲಿ ಸನ್ ಪಿಕ್ಚರ್ಸ್ ನ ನಿರ್ಮಾಪಕ ಕಲಾನಿಧಿ ಮಾರನ್ ನಾಯಕ ನಟ, ನಿರ್ದೇಶಕ ಮತ್ತು ಸಂಗೀತ ಸಂಯೋಜಕರಿಗೆ ದುಬಾರಿ BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದ ನಟಿ ವಾಮಿಕಾ ಗಬ್ಬಿ ಅವರಿಗೇಕೆ ಕಾರು ನೀಡಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸನ್ ಪಿಕ್ಚರ್ಸ್ ನಿರ್ಮಾಪಕ ಕಲಾನಿಧಿ ಮಾರನ್ ಅವರು ಬ್ಲಾಕ್ ಬಸ್ಟರ್ ‘DC’ ಸಿನಿಮಾದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಐಷಾರಾಮಿ ಹೊಸ BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿರ್ದೇಶಕ ಅರುಣ್ ಮಾಥೇಶ್ವರನ್, ನಟ ಲೋಕೇಶ್ ಕನಕರಾಜ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಗೆ ಈ ವಿಶೇಷ ಉಡುಗೊರೆ ನೀಡಲಾಗಿದೆ. ಆದರೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಮತ್ತು ಪ್ರಮುಖ ಪಾತ್ರದಲ್ಲಿರುವ ವಾಮಿಕಾ ಗಬ್ಬಿ ಅವರಿಗೆ ಏಕೆ ಗೌರವಾರ್ಪಣೆಯಲ್ಲಿ ಸೇರಿಸಲಾಗಿಲ್ಲ ಎಂದು ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಆಗಸ್ಟ್ 7ರಂದು ಬಿಡುಗಡೆಯಾದ DCಯಲ್ಲಿ ಲೋಕೇಶ್ ಕನಕರಾಜ್ ನಟನಾಗಿ ಚೊಚ್ಚಲ ಸಿನಿಮಾದಲ್ಲಿ ನಟಿಸಿದ್ದಾರೆ. ಅವರೊಂದಿಗೆ ವಾಮಿಕಾ ಗಬ್ಬಿ ಮತ್ತು ಸಂಜನಾ ಕೃಷ್ಣಮೂರ್ತಿ ಅವರೂ ಸಿನಿಮಾದಲ್ಲಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನ ಮತ್ತು ಸನ್ ಪಿಕ್ಚರ್ಸ್ ನಿರ್ಮಾಣದ ಸಿನಿಮಾ 25 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿತ್ತು. ಆದರೆ ವಿಶ್ವಾದ್ಯಂತ 100 ಕೋಟಿ ರೂ.ಗೂ ಮೀರಿ ಗಳಿಕೆ ಸಾಧಿಸಿದೆ.

ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಮಾರನ್ ಅವರು ತಂಡದ ಮೂವರು ಸದಸ್ಯರಾದ ಅರುಣ್, ಲೋಕೇಶ್, ಅನಿರುದ್ಧ್ ಅವರ ಕೊಡುಗೆಯನ್ನು ಗುರುತಿಸಿ ಗೌರವಿಸಿದ್ದಾರೆ. ಅರುಣ್ ಚಿತ್ರವನ್ನು ನಿರ್ದೇಶಿಸಿದರೆ, ಲೋಕೇಶ್ ‘ದೇವದಾಸ್’ ಎಂಬ ಪ್ರಮುಖ ಪಾತ್ರ ನಿರ್ವಹಿಸಿದರು. ಅನಿರುದ್ಧ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಬಿಡುಗಡೆಯ ನಂತರ ಸಿನಿಮಾಗೆ ಇವರ ಕೊಡುಗೆಗಳು ಮುಖ್ಯವಾಗಿ ಚರ್ಚೆಯ ವಿಷಯಗಳಾಗಿದ್ದವು.

ಆದರೆ ಕೇವಲ ನಿರ್ದೇಶಕ, ನಾಯಕ ನಟ ಮತ್ತು ಸಂಗೀತ ನಿರ್ದೇಶಕರಿಗೆ ಮಾತ್ರ ಕಾರುಗಳನ್ನು ಉಡುಗೊರೆಯಾಗಿ ನೀಡುವ ನಿರ್ಧಾರ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ವಾಮಿಕಾ ಅವರಿಗೆ ಏಕೆ ಉಡುಗೊರೆ ನೀಡಿಲ್ಲ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ವಾಮಿಕಾ ಅವರು ಲೋಕೇಶ್ ಅವರಿಗೆ ನಾಯಕಿಯಾಗಿ ‘ಚಂದ್ರ’ ಪಾತ್ರವನ್ನು ನಿರ್ವಹಿಸಿದ್ದರು. ಅವರ ಅಭಿನಯವೂ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಒಬ್ಬ ಬಳಕೆದಾರರು, “ವಾಮಿಕಾಗೆ ಕಾರು ಇಲ್ಲವೆ? ಇದು ನಿಜವೆ?” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, “ಒಂದು ಕುತೂಹಲಕಾರಿ ಪ್ರಶ್ನೆ– ದಕ್ಷಿಣ ಭಾರತದಲ್ಲಿ ಚಿತ್ರದ ಯಶಸ್ಸಿನ ನಂತರ ಕಾರು ಉಡುಗೊರೆ ನೀಡುವುದು ವಾಡಿಕೆ. ಆದರೆ ಹೀಗೆ ಪದೇಪದೇ ಸಿಗುವ ಅಷ್ಟೊಂದು ಕಾರುಗಳನ್ನು ಇವರು ಏನು ಮಾಡುತ್ತಾರೆ? ಅಂದಹಾಗೆ ವಾಮಿಕಾ ಗಬ್ಬಿ ಅವರಿಗೆ ಕಾರು ಸಿಗದೆ ಇರುವುದು ತುಂಬಾ ನಿರಾಶಾದಾಯಕ. ಅವರು ಚಿತ್ರದ ಜೀವಾಳವಾಗಿದ್ದರು” ಎಂದು ಪ್ರಶ್ನಿಸಿದ್ದಾರೆ.

ಅಂತಹ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:

‘DC’ ಸಿನಿಮಾವು ‘ದೇವದಾಸ್’ ಕತೆಯನ್ನು ಆಧರಿಸಿದರೂ ಅದನ್ನು ಹೆಚ್ಚು ಗಂಭೀರ ಹಾಗೂ ಆಕ್ಷನ್ ಪ್ರಧಾನ ಶೈಲಿಯಲ್ಲಿ ಪ್ರಸ್ತುತಪಡಿಸುತ್ತದೆ. ಇದರಲ್ಲಿ ಲೋಕೇಶ್ ಅವರು ‘ದೇವದಾಸ್’ ಪಾತ್ರದಲ್ಲಿ ಮತ್ತು ವಾಮಿಕಾ ‘ಚಂದ್ರ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವು ಲೋಕೇಶ್ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದೆ. ಅವರು ಕ್ಯಾಮೆರಾ ಹಿಂದಿನ ಕೆಲಸದಿಂದ ನಾಯಕನಟನ ಪಾತ್ರಕ್ಕೆ ಬದಲಾಗಿದ್ದಾರೆ. ಅವರ ಅಭಿನಯ ಪ್ರಶಂಸೆಗೆ ಪಾತ್ರವಾಗಿತ್ತು.

ಅರುಣ್ ಮಾಥೇಶ್ವರನ್ ಅವರ ಚಿತ್ರಕಥೆ ಮತ್ತು ನಟರ ಅಭಿನಯವು ಮೆಚ್ಚುಗೆಗೆ ಪಾತ್ರವಾದಂತೆ, ಅನಿರುದ್ಧ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಆಕರ್ಷಣೆ ಹೆಚ್ಚಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor