ವಿಮಾನ ಪ್ರಯಾಣದ ವೇಳೆ ದಂಪತಿಯ ಜಗಳ; ಪತಿ ಭದ್ರತಾ ಸಿಬ್ಬಂದಿ ವಶಕ್ಕೆ
ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ದಂಪತಿ ಜಗಳ ತಾರಕಕ್ಕೇರಿ, ಮಧ್ಯಪ್ರವೇಶಿಸಿದ ಸಹ ಪ್ರಯಾಣಿಕನ ಜತೆಗೂ ಪತಿ ಜಗಳವಾಡಿದ ಘಟನೆ ಅಮೃತಸರ- ದಿಲ್ಲಿ ವಿಮಾನದಲ್ಲಿ ಶನಿವಾರ ನಡೆದಿರುವುದು ಬೆಳಕಿಗೆ ಬಂದಿದೆ. ವಿಮಾನ ಲ್ಯಾಂಡ್ ಆದ ಬಳಿಕ ಪತಿಯನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.
"ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಮೂರನೇ ಪ್ರಯಾಣಿಕ ಮಧ್ಯಪ್ರವೇಶಿಸಿದ್ದರು" ಎಂದು ಮೂಲಗಳು ಹೇಳಿವೆ.
"2025ರ ಜೂನ್ 28ರಂದು ಅಮೃತಸರದಿಂದ ದಿಲ್ಲಿಗೆ ಹೋಗುತ್ತಿದ್ದ ಎಐ454 ವಿಮಾನದಲ್ಲಿ ಪ್ರಯಾಣಿಕರೊಬ್ಬರ ದುರ್ವರ್ತನೆ ಘಟನೆ ಸಂಭವಿಸಿರುವುದನ್ನು ಏರ್‌ಇಂಡಿಯಾ ದೃಢಪಡಿಸುತ್ತಿದೆ. ವಿಮಾನ ಇಳಿಯಲು ಕ್ಯಾಬಿನ್ ಸಿಬ್ಬಂದಿ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ, ಸಹ ಪ್ರಯಾಣಿಕನ ಜತೆ ಮತ್ತೊಬ್ಬ ಪ್ರಯಾಣಿಕ ಜಗಳವಾಡುತ್ತಿದ್ದುದನ್ನು ಗಮನಿಸಿದರು. ತನ್ನನ್ನು ನಿಂದಿಸಿದ್ದಾಗಿ ಸಹ ಪ್ರಯಾಣಿಕ ದೂರಿದರು.
"ನಮ್ಮ ಕ್ಯಾಬಿನ್ ಸಿಬ್ಬಂದಿ ತಕ್ಷಣ ಪರಿಸ್ಥಿತಿ ತಿಳಿಗೊಳಿಸಿ ಎರಡನೇ ಪ್ರಯಾಣಿಕನನ್ನು ಬ್ಯುಸಿನೆಸ್ ಕ್ಲಾಸ್ ವಿಭಾಗಕ್ಕೆ ಕರೆದೊಯ್ದರು. ಎರಡನೇ ಪ್ರಯಾಣಿಕ ನೀಡಿದ ದೂರಿನ ಮೇರೆಗೆ ಪೈಲಟ್ ಇನ್ ಕಮಾಂಡ್, ವಿಮಾನ ದೆಹಲಿಯಲ್ಲಿ ಇಳಿದ ಬಳಿಕ ಈ ಪ್ರಕರಣವನ್ನು ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದರು" ಎಂದು ವಿವರಿಸಿದ್ದಾರೆ.