Kalaburagi | ಬಾವಿಗೆ ಜಿಗಿದು ತಾಯಿ, ಇಬ್ಬರು ಪುತ್ರಿಯರು ಆತ್ಮಹತ್ಯೆ
ಕಲಬುರಗಿ: ತಾಯಿ ಹಾಗೂ ಇಬ್ಬರು ಪುತ್ರಿಯರು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಇಕ್ಕಳಕಿ ಗ್ರಾಮದ ನಿವಾಸಿಗಳಾದ ಗೌರಾಬಾಯಿ ಪೀರಪ್ಪ ತಳಕೇರಿ (52) ಹಾಗೂ ಅವರ ಪುತ್ರಿಯರಾದ ಅಂಬಿಕಾ (22) ಮತ್ತು ಭಾಗ್ಯಶ್ರೀ (20) ಎಂದು ಗುರುತಿಸಲಾಗಿದೆ.
ಮೃತರು ಮಾದನ ಹಿಪ್ಪರಗಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಸುಮಾರು 2.13 ಲಕ್ಷ ರೂ. ಹಾಗೂ ಖಾಸಗಿಯಾಗಿ ಸುಮಾರು 4 ಲಕ್ಷ ರೂ. ಸಾಲವಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಮೂವರ ಸಾವಿಗೆ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚಿನ ಸಾಲ ಇರುವುದರಿಂದ ಪತ್ನಿ ಅದರ ಬಗ್ಗೆ ಚಿಂತಿಸುತ್ತಿದ್ದರು. ಮೃತ ಇಬ್ಬರು ಪುತ್ರಿಯರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಮೃತ ಗೌರಾಬಾಯಿ ಅವರ ಪತಿ ಪೀರಪ್ಪ ತಳಕೇರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬುಧವಾರ ಕುರಿಗಳಿಗೆ ಮೇವು ತರಲು ಹೊಲಕ್ಕೆ ಹೋಗುವುದಾಗಿ ತೆರಳಿದ್ದ ಗೌರಾಬಾಯಿ, ಶ್ರೀದೇವಿ ಪಾಟೀಲ್ ಎಂಬುವರ ಹೊಲದಲ್ಲಿರುವ ಬಾವಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾದನ ಹಿಪ್ಪರಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.