ಸ್ವಾಭಿಮಾನ, ಆತ್ಮವಿಶ್ವಾಸದ ಬದುಕಿಗಾಗಿ ಪಂಚ ಗ್ಯಾರಂಟಿ ಯೋಜನೆ: ಯು.ಟಿ.ಖಾದರ್
ತಲಪಾಡಿ: ಪಂಚ ಗ್ಯಾರಂಟಿ ಯೋಜನೆಗಳ ನೋಂದಣಿ, ಕುಂದುಕೊರತೆಗಳ ಪರಿಶೀಲನೆ ಸಭೆ
ಉಳ್ಳಾಲ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಆಶ್ರಯದಲ್ಲಿ ತಲಪಾಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ನೋಂದಣಿ ಮತ್ತು ಕುಂದುಕೊರತೆಗಳ ಪರಿಶೀಲನಾ ಸಭೆ ತಲಪಾಡಿ ಗ್ರಾಮ ಪಂಚಾಯತ್ ಬಳಿಯ ಖಾಸಗಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಸ್ಥಳೀಯ ಶಾಸಕರು, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಬದುಕಿಗಾಗಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಂಡಿದೆ. ಜನರ ಮೇಲಿನ ಕಾಳಜಿಯಿಂದ ಸರಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪುತ್ತಿದೆಯೇ ಎಂಬುದನ್ನು ಅರಿಯಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮಾಡಲಾಗಿದೆ. ಕಡು ಬಡವನ ಮನೆಯ ಪ್ಯೂಸನ್ನು ಲೈನ್ ಮೆನ್ ಗಳು ತೆಗೆದು ಕೊಂಡು ಹೋಗುವುದನ್ನು ಗೃಹಜ್ಯೋತಿ ಯೋಜನೆ ತಡೆದಿದೆ ಎಂದು ಹೇಳಿದರು.
ವಿದ್ಯಾವಂತರು ಸಮರ್ಪಕ ಉದ್ಯೋಗವಿಲ್ಲದೆ ಖರ್ಚಿಗೂ ಕಾಸಿಲ್ಲದೆ ಪರಿತಪಿಸುತ್ತಿದ್ದು ಅಂತಹವರಿಗೆ ಯುವನಿಧಿ ಮೂಲಕ ಮಾಸಿಕ ಮೂರು ಸಾವಿರ ರೂ. ನೀಡಲಾಗುತ್ತಿದೆ.ಮಹಿಳೆಯರನ್ನು ಕಂಡೊಡನೆ ಸರಕಾರಿ ಬಸ್ಸುಗಳು ನಿಲ್ಲಿಸುವ ಯಶಸ್ವಿ ಶಕ್ತಿ ಯೋಜನೆ ಸಹಿತ ಜನರು ಸ್ವಾಭಿಮಾನದಲ್ಲಿ ಬದುಕುವ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಜನಪ್ರಿಯಗೊಂಡಿವೆ.ಯಾವ ಪ್ರದೇಶದಲ್ಲಿ ಆರ್ಥಿಕ ಚಲನವಲನ ಆಗುತ್ತದೋ ಆ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಪ್ರತೀ ಗ್ರಾಮಗಳಲ್ಲೂ ಗ್ಯಾರಂಟಿ ಫಲಾನುಭವಿಗಳ ಸ್ವಸಹಾಯ ಸಂಘಗಳನ್ನೂ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾರಿಗೆ ತಂದಿರುವುದು ಇಂದಿರಾ ಗಾಂಧಿ. ಈ ಇಲಾಖೆಯಡಿ ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಕಾರ್ಯ ಚಟುವಟಿಕೆ ನಡೆಯುತ್ತಿದೆ. ದೇಶದಲ್ಲಿ ಇರುವ 30 ರಾಜ್ಯಗಳಲ್ಲಿ ಪಂಚ ಗ್ಯಾರಂಟಿ ನೀಡಿರುವುದು ಕರ್ನಾಟಕ ಸರ್ಕಾರ ಮಾತ್ರ. ಇಂತಹ ಯೋಜನೆಗಳನ್ನು ಈ ಹಿಂದೆ ಯಾವುದೇ ಸರ್ಕಾರ ನೀಡಿಲ್ಲ ಎಂದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಫೀಕ್ ಅಂಬ್ಲಮೊಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಕಾರ್ಯದರ್ಶಿ ಮನ್ಸೂರ್ ಮಂಚಿಲ, ದಿನೇಶ್ ರೈ, ತಲಪಾಡಿ ಗ್ರಾಮ ಅಧ್ಯಕ್ಷ ಇಸ್ಮಾಯೀಲ್, ಸದಸ್ಯ ವೈಭವ್ ಶೆಟ್ಟಿ, ಪಿಡಿಒ ಸಂಧ್ಯಾ, ಸಲಾಮ್ ತಲಪಾಡಿ, ರವಿರಾಜ್ ಶೆಟ್ಟಿ, ಇಸ್ಮಾಯೀಲ್, ಪವನ್ ರಾಜ್, ಇಬ್ರಾಹೀಂ ತಲಪಾಡಿ, ಪುರುಷೋತ್ತಮ ಶೆಟ್ಟಿ ಪಿಲಾರ್, ಯು.ಸಲಾಂ ಉಚ್ಚಿಲ, ಸಲಾಮ್ ಕೆಸಿರೋಡ್, ಕಾರ್ಯ ನಿರ್ವಹಣಾಧಿಕಾರಿ ಗುರುದತ್, ಟಿ.ಇಸ್ಮಾಯೀಲ್, ದೇವಣ್ಣ ಶೆಟ್ಟಿ, ಝಿಯಾದ್ ಮುಕ್ಕಚ್ಚೇರಿ, ಚಂದ್ರಿಕಾ ರೈ, ಮೂಸಾ ತಲಪಾಡಿ, ದಿನೇಶ್ ಕುಂಪಲ, ವಿಲ್ಫ್ರೆಡ್ ಡಿಸೋಜ, ಯು.ಟಿ.ಫರೀದ್ ಇಫ್ತಿಕಾರ್ ಮತ್ತಿತರರು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಸುರೇಖಾ ಸ್ವಾಗತಿಸಿದರು. ಅಶ್ರಫ್ ಕೆ.ಸಿ.ರೋಡ್, ಸೋಶಿಯಲ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.