×
Ad

3 ವರ್ಷಗಳಿಗೆ ಮೂರು ಸ್ತರದ ದರ ಏರಿಕೆ ಪ್ರಸ್ತಾವ ಕೆಇಆರ್‌ಸಿಗೆ ಮೆಸ್ಕಾಂ ಪ್ರಸ್ತಾವ: ಗ್ರಾಹಕರ ವಿರೋಧ

Update: 2025-02-18 20:33 IST

ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ(ಮೆಸ್ಕಾಂ) ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆಯಿಂದ 70 ಪೈಸೆ ರೂವರೆಗೆ ವಿದ್ಯುತ್ ದರ ಏರಿಕೆ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಎದುರು ಸಲ್ಲಿಸಿರುವ ಪ್ರಸ್ತಾವನೆಗೆ ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಮಂಗಳೂರಿನ ಮೆಸ್ಕಾಂ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ವಿಚಾರಣೆ ವೇಳೆ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ಗ್ರಾಹಕರು ದರ ಏರಿಕೆಯನ್ನು ವಿರೋಧಿಸಿದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯ ಕುಮಾರ್ ದರ ಏರಿಕೆ ಕುರಿತಾದ ಪ್ರಸ್ತಾವನೆಯನ್ನು ಮಂಡಿಸಿದರು.

ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಐದು ವರ್ಷಕ್ಕೊಮ್ಮೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಹೀಗಾಗಿ ಮೆಸ್ಕಾಂ ಐದರ ಬದಲು ಮೂರು ವರ್ಷಗಳಿಗೆ ಅಂದಾಜು ಆದಾಯ ಹಾಗೂ ವೆಚ್ಚವನ್ನು ಉಲ್ಲೇಖಿಸಿ ಶೇಕಡಾವಾರು ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದೆ. 2025-26ನೇ ಸಾಲಿಗೆ ಸರಾಸರಿ 70 ಪೈಸೆ, 2026-27ನೇ ಸಾಲಿಗೆ 37 ಪೈಸೆ ಹಾಗೂ 2027-28ನೇ ಸಾಲಿಗೆ 54 ಪೈಸೆ ದರ ಏರಿಕೆಯ ಪ್ರಸ್ತಾಪ ಮಾಡಲಾಗಿದೆ. 2025-26ನೇ ಸಾಲಿನಲ್ಲಿ ನಿರೀಕ್ಷಿತ ಒಟ್ಟು ವೆಚ್ಚ 5,997 ಕೋಟಿ ರೂ. ಅಂದಾಜಿಸಲಾಗಿದ್ದು, 6,329.29 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರ ಹೊರತೂ 478.48 ಕೋಟಿ ರೂ. ಕೊರತೆ ಇದೆ ಎಂದು ರಾಜಿ ಜಯ ಕುಮಾರ್ ಹೇಳಿದರು.

ನಿರೀಕ್ಷಿತ ವಿದ್ಯುತ್ ಮಾರಾಟ 6,859.29 ಮೆಗಾ ಯೂನಿಟ್ ಆಗಿದ್ದು, ವಿದ್ಯುತ್ ಪೂರೈಕೆ ವೆಚ್ಚ 9.23 ರು. ಆಗಿರಲಿದೆ. ಹಾಲಿ ದರಗಳಲ್ಲಿ 8.53 ರು. ಆದಾಯ ನಿರೀಕ್ಷಿಸಲಾಗಿದ್ದು, 0.70 ಪೈಸೆ ದರ ಹೆಚ್ಚಳ ಅನಿವಾರ್ಯ ಎಂದು ದರ ಏರಿಕೆ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

2026-27ನೇ ಸಾಲಿನಲ್ಲಿ 6,446.20 ಕೋಟಿ ರು. ನಿರೀಕ್ಷಿತ ವೆಚ್ಚವಾಗಲಿದ್ದು, 6,430.89 ಕೋಟಿ ರು. ಆದಾಯದ ನಿರೀಕ್ಷೆ ಇದೆ. 270.17 ಕೋಟಿ ರು.ಗಳ ಕೊರತೆಯಾಗಲಿದೆ. 7,205.98 ಮೆಗಾವ್ಯಾಟ್ ವಿದ್ಯುತ್ ಮಾರಾಟದ ನಿರೀಕ್ಷೆ ಇದ್ದು, ಹಾಲಿ ದರಗಳಲ್ಲಿ ಯೂನಿಟ್‌ಗೆ 8.92 ರೂ. ಸರಬರಾಜು ವೆಚ್ಚವಾಗಲಿದೆ. ಆದಾಯ 8.55 ರು. ಆಗಿದ್ದು, ಆದಾಯ ಸರಿದೂಗಿಸಲು 0.37 ಪೈಸೆ ದರ ಹೆಚ್ಚಳದ ಅಗತ್ಯತೆ ಇದೆ ಎಂದು ಪ್ರಸ್ತಾಪಿಸಲಾಗಿದೆ.

2027-28ನೇ ಸಾಲಿನಲ್ಲಿ 6,881.80 ಕೋಟಿ ರೂ. ನಿರೀಕ್ಷಿತ ವೆಚ್ಚ ಇರಲಿದ್ದು, 6,890.64 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಹಾಗಿದ್ದರೂ 405.94 ಕೋಟಿ ರು.ಗಳ ಕೊರತೆಯಾಗಲಿದೆ. 7,572.20 ಮೆಗಾವ್ಯಾಟ್ ಯುನಿಟ್ ವಿದ್ಯುತ್ ಮಾರಾಟದ ನಿರೀಕ್ಷೆ ಇದೆ. 9.10 ರು. ಯೂನಿಟ್ ಪೂರೈಕೆ ವೆಚ್ಚವಾಗಿದ್ದು, 8.56 ರೂ. ಹಾಲಿ ದರದಲ್ಲಿ ಆದಾಯ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ 0.54 ಪೈಸೆ ದರ ಏರಿಕೆಯನ್ನು ಪ್ರಸ್ತಾಪಿಸಲಾಗಿದೆ. ಇದರ ಹೊರತು ಯಾವುದೇ ಹೊಸ ಯೋಜನೆ ಅಥವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿಲ್ಲ ಎಂದು ಮೆಸ್ಕಾಂ ಎಂಡಿ ಜಯ ಕುಮಾರ್ ಹೇಳಿದರು.

ಸೋಲಾರ್ ಸಂಪರ್ಕಕ್ಕೂ ಅಭಿವೃದ್ಧಿ ಶುಲ್ಕ

ಗೃಹ ಬಳಕೆಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಗ್ರಾಹಕರಿಂದ 770 ರೂ. ಠೇವಣಿ ಹಾಗೂ 5,750 ರೂ. ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುತ್ತದೆ. ಅಭಿವೃದ್ಧಿ ಶುಲ್ಕದ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎನ್ನುವುದು ಇದರ ಮಾನದಂಡ. ಆದರೆ, ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯಡಿ ಮನೆಗೆ ಸೋಲಾರ್ ವಿದ್ಯುತ್ ಸಂಪರ್ಕ ಪಡೆದ ವರಿಂದಲೂ ಅಭಿವೃದ್ಧಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸೋಲಾರ್ ವಿದ್ಯುತ್ ಬಳಕೆಗೆ ಪೋತ್ಸಾಹ ನೀಡಬೇಕೇ ಹೊರತು ತೊಂದರೆ ನೀಡಬಾರದು ಎಂದು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಮನವಿ ಮಾಡಿದರು.

ಮೆಸ್ಕಾಂ ಹೊರಗುತ್ತಿಗೆ ಕಾಮಗಾರಿಗಳಲ್ಲಿ ಮೋಸ ನಡೆಯುತ್ತಿದ್ದು, 1 ಕಿ.ಮೀ. ವಿದ್ಯುತ್ ಲೈನ್ ಎಳೆಯಲು ಮೆಸ್ಕಾಂ ತನ್ನದೇ ಎಸ್‌ಆರ್ ದರಕ್ಕಿಂತ ಹೆಚ್ಚಿನ ದರದಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಮೆಸ್ಕಾಂಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ ಆಗ್ರಹಿಸಿದರು.

ಮೆಸ್ಕಾಂನಲ್ಲಿ 27 ಲಕ್ಷ ಗ್ರಾಹಕರಿದ್ದು, 6,100 ಕೋಟಿ ರು. ವಹಿವಾಟು ನಡೆಸುತ್ತಿದೆ. ಇದರಲ್ಲಿ ಶೇ.65 ಮಂದಿ ಸಬ್ಸಿಡಿ ಹಾಗೂ ಶೇ.35 ಮಂದಿ ನೇರ ಶುಲ್ಕ ಪಾವತಿಸುವವರು ಇದ್ದಾರೆ. ದರ ಪರಿಷ್ಕರಣೆ ಕುರಿತಂತೆ ಗ್ರಾಹಕರಿಗೆ ಜ್ಞಾನದ ಕೊರತೆ ಇದ್ದು, ಇದಕ್ಕಾಗಿ ಗ್ರಾಹಕರಿಗೆ ತರಬೇತಿ ನೀಡುವ ಅವಸ್ಯಕತೆ ಇದೆ ಎಂದು ಕನ್ಸೂಮರ್ ಫಾರಂನ ವೆಂಕಟಗಿರಿ ರಾವ್ ಅಭಿಪ್ರಾಯಪಟ್ಟರು.

ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಮುಖಂಡ ರಾಮಕೃಷ್ಣ ಭಟ್ ಮಾತನಾಡಿ, ಮೆಸ್ಕಾಂನ ವಿತರಣಾ ನಷ್ಟವನ್ನು ಕಡಿಮೆಗೊಳಿಸಬೇಕು. ಸಿಬ್ಬಂದಿಯ ಕಾರ್ಯದಕ್ಷತೆ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು ಎಂದರು.

ಹಗಲು ಹೊತ್ತು ಅನಗತ್ಯವಾಗಿ ಕಚೇರಿಗಳಲ್ಲಿ, ಬೀದಿಗಳಲ್ಲಿ ದೀಪ ಉರಿಯುವುದನ್ನು ತಡೆಗಟ್ಟಬೇಕು. ಇದಕ್ಕೆ ಆಯಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ರವೀಂದ್ರ ಗುಜ್ಜರಬೆಟ್ಟು ಸಲಹೆ ನೀಡಿದರು. ಕೆಇಆರ್‌ಸಿ ಸದಸ್ಯರಾದ ಎಚ್.ಕೆ.ಜಗದೀಶ್, ಜಾವೇದ್ ಅಖ್ತರ್ ಇದ್ದರು.

ನಿವೃತ್ತ ಸಿಬ್ಬಂದಿ ಪಿಂಚಣಿ ಹೊರೆ ಗ್ರಾಹಕರ ಮೇಲೆ!

ಮೆಸ್ಕಾಂ ತನ್ನ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಪಿಂಚಣಿ ಮೊತ್ತವನ್ನು ಗ್ರಾಹಕರ ಬಿಲ್‌ನಲ್ಲಿಯೇ ವಸೂಲಿಗೆ ಮುಂದಾ ಗಿರುವ ಬಗ್ಗೆಯೂ ದರ ಪರಿಷ್ಕರಣೆಯ ಸಾರ್ವಜನಿಕ ವಿಚಾರಣೆಯಲ್ಲಿ ಚರ್ಚೆಗೊಳಗಾಯಿತು.

ಮೆಸ್ಕಾಂ ಮಂಡಿಸಿರುವಂತೆ 2025-26ನೆ ಸಾಲಿನಲ್ಲಿ ಪ್ರತೀ ಯುನಿಟ್‌ಗೆ 0.70 ರೂ. ಏರಿಕೆ ದರ ಜಾರಿಯಾದರೆ ಇದರಲ್ಲಿ 36 ಪೈಸೆ ನೇರವಾಗಿ ಮೆಸ್ಕಾಂನ ನಿವೃತ್ತ ನೌಕರರ ಪಿಂಚಣಿ ಹಾಗೂ ಗ್ರಾಚ್ಯೂಟಿಗೆ ಸಂದಾಯವಾಗಲಿದೆ. ರಾಜ್ಯ ಸರಕಾರ 2001ರಿಂದ ಇಂಧನ ಇಲಾಖೆಯ ನಿವೃತ್ತ ನೌಕರರ ಪಿಂಚಣಿ ಹಾಗೂ ಗ್ರಾಚ್ಯೂಟಿ ಸ್ಕೀಂ ಪರಿಚಯಿಸಿತ್ತು. ಅದಕ್ಕೆ ಫಂಡ್ ಕ್ರಿಯೇಟ್ ಮಾಡಬೇಕು. ಗ್ರಾಹಕರ ಬಿಲ್ ಮೊತ್ತದಿಂದಲೇ ಇದನ್ನು ವಸೂಲಿ ಮಾಡಿ ಫಂಡ್‌ಗೆ ನೀಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಆದರೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿರಲಿಲ್ಲ. ಗ್ರಾಹಕರ ಮೇಲೆ ಈ ಮೊತ್ತ ಹೊರಿಸುವುದು ಸರಿಯಲ್ಲ. ಸರಕಾರವೇ ಇದನ್ನು ತುಂಬಿಕೊಡಬೇಕು ಎಂದು ಆಯೋಗ ತಿಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಈ ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸುವುದು ಸೂಕ್ತ ಎಂದು ನ್ಯಾಯಾಲಯ ತಿಳಿಸಿದೆ. ಹೀಗಾಗಿ 2025-26ಕ್ಕೆ ಮೆಸ್ಕಾಂ ಪ್ರಸ್ತಾವನೆಯ 70 ಪೈಸೆಗಳಲ್ಲಿ 36 ಪೈಸೆ, 2026-27ರಲ್ಲಿ 35 ಪೈಸೆ ಹಾಗೂ 2027-28ರ ಏರಿಕೆ ದರದಲ್ಲಿ 33 ಪೈಸೆ ಮೊತ್ತವನ್ನು ಮೆಸ್ಕಾಂ ಉದ್ಯೋಗಿಗಳ ಪಿಂಚಣಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ.

ಕೆಇಆರ್‌ಸಿ ಅಧ್ಯಕ್ಷ ರವಿ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, 2001ರಲ್ಲಿ ಪಿಂಚಣಿ ಮೊತ್ತವನ್ನು ಗ್ರಾಹಕರಿಂದ ವಸೂಲಿಗೆ ಅನುಮತಿ ನೀಡುವ ಪ್ರಸ್ತಾವನೆಗೆ ಆಯೋಗ ಒಪ್ಪಿರಲಿಲ್ಲ. ನ್ಯಾಯಾಲಯ ತಿಳಿಸಿದ ಕಾರಣದಿಂದ ನಮಗೆ ಈಗ ಏನೂ ಮಾಡುವಂತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News