×
Ad

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: 8 ಮಂದಿ ಆರೋಪಿಗಳ ಬಂಧನ

Update: 2025-05-03 12:47 IST

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝ್ವಾನ್ ಮತ್ತು ಆದಿಲ್‌ ಮೆಹರೂಫ್‌ ಬಂಧಿತ ಆರೋಪಿಗಳು.

ಈ ಕುರಿತು ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್‌, "ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಯಾವುದೇ ಸಮುದಾಯದವರನ್ನು ಕಾನೂನು ಉಲ್ಲಂಘನೆ ಮಾಡಲು ಬಿಡಲ್ಲ. ಎಲ್ಲಾ ತರದ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ." ಎಂದು ಹೇಳಿದರು.

ದ.ಕ.ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಅವಲೋಕನ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಸಲುವಾಗಿ ಪರಮೇಶ್ವರ್‌ ಮಂಗಳೂರಿಗೆ ಆಗಮಿಸಿದ್ದು, ಸರಣಿ ಸಭೆ ನಡೆಸಿದ್ದಾರೆ.

ಕೊಲೆ ನಡೆದ ಕ್ಷಣದಿಂದಲೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ‌ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡರು. ಸಿಸಿ ಕ್ಯಾಮರಾ ಫೂಟೇಜ್ ಅಧಾರದಲ್ಲಿ ಕಾರ್ಯಾಚರಣೆ ಬಿರುಸುಗೊಳಿಸಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

ಆ್ಯಂಟಿ ಕಮ್ಯುನಲ್ ಫೋರ್ಸ್

ದ.ಕ. ಮತ್ತು ಉಡುಪಿ ಜಿಲ್ಲೆ ಕಮ್ಯುನಲ್ ಕೃತ್ಯದಲ್ಲಿ‌ತೊಡಗಿದವರ ಹುಟ್ಟು ಅಡಗಿಸುವ ನಿಟ್ಟಿನಲ್ಲಿ ಸರಕಾರ ಶ್ರಮಿಸುತ್ತಿದ್ದು, ಈ ಉದ್ದೇಶಕ್ಕಾಗಿ ಆ್ಯಂಟಿ ಕಮ್ಯುನಲ್ ಫೋರ್ಸ್‌ ನ್ನು ರಚಿಸಲಾಗುವುದು ಎಂದು ಡಾ‌.ಜಿ.ಪರಮೇಶ್ವರ ಪ್ರಕಟಿಸಿದರು. ಯಾರು ಕಮ್ಯುನಲ್ ಕೃತ್ಯದಲ್ಲಿ ತೊಡಗುತ್ತಾರೆ ಮತ್ತು ಯಾರು ಅವರಿಗೆ ಬೆಂಬಲ ನೀಡುತ್ತಾರೆ.ಅವರ ವಿರುದ್ಧ ಈ ಫೋರ್ಸ್ ನಿರ್ದಾಕ್ಷಿಣ್ಯವಾಗಿ ಕ್ರಮಕೊಳ್ಳಲಿದೆ. ಪ್ರಚೋದನೆಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಆ್ಯಂಟಿ ನಕ್ಸಲ್ ಫೋರ್ಸ್ ರೀತಿ ಈ ಫೋರ್ಸ್ ಕಾರ್ಯನಿರ್ವಹಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News