ದ.ಕ.ಜಿಲ್ಲಾ ಕಾಂಗ್ರೆಸ್ ನ ಮುಸ್ಲಿಂ ವಲಯದ ಸ್ಥಿತಿಗತಿ ಅಧ್ಯಯನಕ್ಕೆ ಜಿ.ಎ.ಬಾವಾ ನೇತೃತ್ವದಲ್ಲಿ ಅಧ್ಯಯನ ಸಮಿತಿ
ನಿವೃತ್ತ ಡಿಸಿಪಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವಾ
ಮಂಗಳೂರು : ದ.ಕ.ಜಿಲ್ಲಾ ಕಾಂಗ್ರೆಸ್ ನ ಮುಸ್ಲಿಂ ವಲಯದ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲು ನಿವೃತ್ತ ಡಿಸಿಪಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ನೇತೃತ್ವದಲ್ಲಿ ಅಧ್ಯಯನ ಸಮಿತಿಯನ್ನು ರಚಿಸಲಾಗಿದೆ.
ಕೆಲವು ದಿನದಿಂದೀಚೆಗೆ ಪಕ್ಷದ ಮುಸ್ಲಿಂ ನಾಯಕರು ಮತ್ತು ಕಾರ್ಯಕರ್ತರ ಆರೋಪಗಳು, ಅಹವಾಲುಗಳು, ಎದುರಿಸುವ ಸಮಸ್ಯೆಗಳು, ವಸ್ತುಸ್ಥಿತಿಯ ಬಗ್ಗೆ ಸಾರ್ವಜನಿಕವಾಗಿ ಈ ಸಮಿತಿ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ತಿಳಿದು ಬಂದಿದೆ. ಈ ಸಮಿತಿಯಲ್ಲಿ ಮುಹಮ್ಮದ್ ಅಲಿ ಪುತ್ತೂರು, ಎನ್.ಎಸ್.ಕರೀಂ, ಹಸನಬ್ಬ ಬಾಳ, ರಫಿ ಬೆಳ್ತಂಗಡಿ, ಶಾಹುಲ್ ಹಮೀದ್ ಬಜ್ಪೆ, ಸಲೀಂ ಉಳ್ಳಾಲ್, ಮುಸ್ತಫಾ ಸುಳ್ಯ ಮತ್ತಿತರರು ಸದಸ್ಯರಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು, ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಿದ್ದಾರೆ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಲು ಹೈಕಮಾಂಡ್ ಸೂಚನೆಯ ಮೇರೆಗೆ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಗೆ ವಾರದೊಳಗೆ ವರದಿ ನೀಡಲು ಸೂಚನೆ ನೀಡಲಾಗುವುದು. ಆ ಬಳಿಕ ವರದಿಯನ್ನು ಪಕ್ಷದ ಹೈಕಮಾಂಡ್‌ಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.