ಅನಂತ ಸುಬ್ಬರಾವ್ ಚಳವಳಿಯಲ್ಲಿ ರಾಜಿ ಮಾಡಿಕೊಳ್ಳದ ಯಶಸ್ವಿ ನಾಯಕ: ರಮಾನಾಥ ರೈ
ಮಂಗಳೂರು: ಅನಂತ ಸುಬ್ಬರಾವ್ ಅವರು ಚಳವಳಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಓರ್ವ ಯಶಸ್ವಿ ನಾಯಕರಾಗಿದ್ದರು. ಸಾರಿಗೆ ಇಲಾಖೆಯ ಲಕ್ಷಾಂತರ ಕಾರ್ಮಿಕರ ನೋವು ನಲಿವುಗಳಲ್ಲಿ ಅವರು ಭಾಗಿಯಾಗು ತ್ತಿದ್ದರು. ಸುಬ್ಬರಾವ್ ಅವರಂತೆ ಆದರ್ಶ ಕಾರ್ಮಿಕ ನಾಯಕನ ಆದರ್ಶಗಳನ್ನು ನಾವಿಂದು ಪಾಲಿಸಬೇಕಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಅಗಲಿಕ ಕಾರ್ಮಿಕ ನಾಯಕ , ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಹಿರಿಯ ಮುಂದಾಳು, ಎಐಟಿಯುಸಿ ಹಾಗೂ ಕೆಎಸ್‌ಆರ್‌ಟಿಸಿ ಯೂನಿಯನ್‌ನ ನಾಯಕ ಅನಂತ ಸುಬ್ಬರಾವ್ ಅವರಿಗೆ ಬುಧವಾರ ಸಿಪಿಐ ದ.ಕ. ಮತ್ತು ಉಡುಪಿ, ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಗರದ ಬಿಜೈನ ಕರ್ಣಾಟಕ ಬ್ಯಾಂಕ್ ನೌಕರರ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಎಸ್‌ಆರ್‌ಟಿಸಿ ಸಂಸ್ಥೆಯ ಕಾರ್ಮಿಕರ ನಾಯಕರಾಗಿ ಗುರುತಿಸಿಕೊಂಡಿದ್ದ ಅನಂತ ಸುಬ್ಬರಾವ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಕಾರ್ಮಿಕರ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಹಿಂದೆ ತಾನು ಸಾರಿಗೆ ಸಚಿವನಾಗಿದ್ದಾಗ ಅವರ ಹೋರಾಟವನ್ನು ಚೆನ್ನಾಗಿ ಅರಿತುಕೊಳ್ಳುವ ಅವಕಾಶ ಸಿಕ್ಕಿತು ಎಂದು ನೆನಪಿಸಿಕೊಂಡದರು.
ಪ್ರಗತಿಪರ ಚಿಂತಕ, ವೈದ್ಯ ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾತನಾಡಿ ಅನಂತ ಸುಬ್ಬರಾವ್ ಅವರು ಕಾರ್ಮಿಕರ ಮತ್ತು ಜನಸಾಮಾನ್ಯರ ಚಳವಳಿಗಳಿಗೆ ತನ್ನ ಜೀವನವನ್ನು ಸಮರ್ಪಿಸಿದ ನಾಯಕರಲ್ಲಿ ಕೊನೆಯ ಕೊಂಡಿಯಾಗಿದ್ದವರು. ಅವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ಕಾರ್ಮಿಕರ ಬಗ್ಗೆ , ರಾಜಕೀಯ, ಕಮುನ್ಯಿಸ್ಟ್ ಸಿದ್ಧಾಂತ ಬಗ್ಗೆ ಅಪಾರ ಕಾಳಜಿ, ಬದ್ಧತೆಯನ್ನು ಅವರು ಹೊಂದಿದ್ದರು.ಕಾರ್ಮಿಕರ ಕಾನೂನು, ಮುಖ್ಯವಾಗಿ ಕೆಎಸ್‌ಆರ್‌ಟಿಸಿ ವರ್ಕರ್ಸ್ ಫೆಡರೇಶನ್‌ನ ಪ್ರತಿನಿತ್ಯದ ಆಗುಹೋಗುಗಳ ಬಗ್ಗೆ ಅವರಲ್ಲಿದ್ದ ಅಪಾರ ಜ್ಞಾನ ಭಂಡಾರವನ್ನು ಸರಿಗಟ್ಟಲು ಯಾರಿಗೂ ಸಾಧ್ಯವಿಲ್ಲ ಎಂದರು.
ಅನಂತ ಸುಬ್ಬ ರಾವ್ ಅವರಂತಹ ನಾಯಕರು ಮಾಡಿರುವ ಜನೋಪಯೋಗಿ ಕೆಲಸ, ಕ್ರಾಂತಿಕಾರಿ ಹೋರಾಟದ ಮಾಹಿತಿಯನ್ನು ಜನರಿಗೆ ತಲುಪಿಸಬೇಕಾಗಿದೆ. ಅನಂತ ಸುಬ್ಬರಾವ್ ಕಟ್ಟಿರುವ ಸಂಘಟನೆಗಳನ್ನು ಅದರಲ್ಲೂ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಡಾ.ಕಕ್ಕಿಲ್ಲಾಯ ಹೇಳಿದರು.
ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಫಣೀಂದ್ರ ಅವರು ಮಾತನಾಡಿ ‘ಅನಂತ ಸುಬ್ಬರಾವ್ ಆರು ದಶಕಗಳಿಂದ ಕಾರ್ಮಿಕರ ಗಟ್ಟಿ ಧ್ವನಿಯಾಗಿ ಗುರುತಿಸಿಕೊಂಡಿದ್ದರು ’ಎಂದು ಬಣ್ಣಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್, ಡಿಎಸ್‌ಎಸ್ ಮುಖಂಡ ದೇವದಾಸ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರವೀಣ್ ಕುಮಾರ್ , ಎನ್‌ಎಫ್ ಐಡಬ್ಲ್ಯು ಜಿಲ್ಲಾ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿದರು.
ಸಿಪಿಐ ಜಿಲ್ಲಾ ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್, ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ. ಕರುಣಾಕರ ಮಾರಿಪಳ್ಳ, ಪ್ರಮುಖರಾದ ಶಶಿಕಲಾ ಉಡುಪಿ ಮತ್ತಿತರರು ಭಾಗವಹಿಸಿದ್ದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಸೀತಾರಾಮ ಬೇರಿಂಜ ಕಾರ್ಯಕ್ರಮ ನಿರೂಪಿಸಿದರು.