×
Ad

ಬಜ್ಪೆ: ಮಾರಕಾಸ್ತ್ರದಿಂದ ಕಡಿದು ರೌಡಿ ಶೀಟರ್‌ನ ಕೊಲೆ

Update: 2025-05-01 21:56 IST

ಮಂಗಳೂರು: ಬಜ್ಪೆಯ ಕಿನ್ನಿಪದವು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ಸಂಜೆ ರೌಡಿ ಶೀಟರ್‌ ಒಬ್ಬನ ಕೊಲೆ ನಡೆದಿರುವ ಬಗ್ಗೆ ವರದಿಯಾಗಿದೆ.

ಕೊಲೆಯಾದವನನ್ನು ರೌಡಿ ಶೀಟರ್‌ ಸುಹಾಸ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಸುರತ್ಕಲ್‌ನ ಮುಹಮ್ಮದ್ ಫಾಝಿಲ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಂಡವೊಂದು ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ದಾಳಿ ನಡೆಸುತ್ತಿರುವ ವೀಡಿಯೊ ವೈರಲ್‌ ಆಗಿದೆ.

ಸುಹಾಸ್ ಶೆಟ್ಟಿ ವಿರುದ್ಧ ಮುಹಮ್ಮದ್ ಫಾಝಿಲ್‌ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಕಿನ್ನಿಪದವು ಪೇಟೆಯಲ್ಲಿ ಮೀನಿನ ಪಿಕ್ ಅಪ್ ಮತ್ತು ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿತ್ತು. ಆ ಬಳಿಕ ಮಾತಿನ ಚಕಮಕಿ ನಡೆದು ಹೊಡೆದಾಟ ಆರಂಭಗೊಂಡಿದ್ದು, ಆರೋಪಿಗಳು ಮಾರಕಾಸ್ತ್ರದಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದು, ಕೃತ್ಯ ನಡೆದಿರುವ ಸ್ಥಳವನ್ನು ಬಂದ್ ಮಾಡಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News