×
Ad

ಬಂಟ್ವಾಳ| ಅಳಿಕೆ ಗ್ರಾಮದ ಬರೆಂಗೋಡಿಯಲ್ಲಿ ಕಲ್ಲಿನ ಗಣಿಗಾರಿಕೆಯಿಂದ ಹಲವು ಮನೆಗಳ ಗೋಡೆ ಬಿರುಕು

ಗಣಿಗಾರಿಕೆಯನ್ನು ಶೀಘ್ರ ಸ್ಥಗಿತಗೊಳಿಸುವಂತೆ ಕೋರಿ ದ.ಕ. ಜಿಲ್ಲಾಧಿಕಾರಿಗೆ ದೂರು

Update: 2025-09-15 19:32 IST

(ಕಲ್ಲಿನ ಗಣಿಗಾರಿಕೆ - ಬಿರುಕು ಬಿಟ್ಟಿರುವ ಮನೆಗಳ ಗೋಡೆ)

ಮಂಗಳೂರು: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬರೆಂಗೋಡಿ, ಕೋಡಿಜಾಲು ಎಂಬಲ್ಲಿ ಕಪ್ಪು ಕಲ್ಲು ಗಣಿಗಾರಿಕೆಯಲ್ಲಿ ಭಾರಿ ಪ್ರಮಾಣದ ಕಲ್ಲಿನ ಸ್ಫೋಟದ ತೀವ್ರತೆಗೆ ಸ್ಥಳೀಯ ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, ಜೀವ ಭಯದಿಂದ ದಿನ ಕಳೆಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ, ಶೀಘ್ರ ಪರಿಶೀಲಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯರು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರಿಗೆ ದೂರು ಸಲ್ಲಿಸಿದ್ದಾರೆ.

ಗಣಿಗಾರಿಕೆಗೆ ಪರವಾನಿಗೆ ನೀಡುವ ಸಂದರ್ಭ ಸ್ಥಳೀಯ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡದೆ, ಗೌಪ್ಯವಾಗಿ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಂದ, ಧಾರ್ಮಿಕ ಕೇಂದ್ರಗಳಿಂದ ಹಾಗೂ ಆಸ್ಪತ್ರೆಯಿಂದ ನಿರಾಪೇಕ್ಷಣಾ ಪತ್ರವನ್ನು ಕೂಡ ಪಡೆಯದೆ ಕಾನೂನು ಬಾಹಿರವಾಗಿ ಪರವಾನಿಗೆ ನೀಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ-ಕಾಂಗ್ರೆಸ್ ರಾಜಕೀಯ ‌ಜುಗಲ್ ಬಂದಿ:-

ಕೇರಳ‌ ಮೂಲದ ಜಾನ್ ವಿ.ಕೆ ಹಾಗೂ ಸ್ಟೀಫನ್ ಜೋಸೆಫ್ ಮಾಲಕತ್ವದಲ‌್ಲಿ ನಡೆಯುತ್ತಿರುವ ಕಲ್ಲಿನ ಗಣಿಗಾರಿಕೆಗೆ ಪ್ರಾರಂಭದಲ್ಲೇ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದ್ದರೂ ಕಾಂಗ್ರೆಸ್- ಬಿಜೆಪಿಗರ ಹೊಂದಾಣಿಕೆ ರಾಜಕೀಯ ಹಾಗೂ ಕೇರಳದ ಧಣಿಗಳ ದುಡ್ಡಿನ ಪ್ರಭಾವದಿಂದ ಬೆದರಿಕೆ, ಧಮ್ಕಿಯ ಮ‌ೂಲಕ ಸ್ಥಳೀಯರ ಬಾಯಿ ಮುಚ್ಚಿಸಲಾಗುತ್ತಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಈ ಸಂದರ್ಭದಲ್ಲಿ ದೂರಿನ ಪ್ರತಿಯನ್ನು ಜಿಲ್ಲಾ ಎಸ್ಪಿ, ಅಪರ ಜಿಲ್ಲಾಧಿಕಾರಿ, ಹಿರಿಯ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೂ ನೀಡಿದರು.

ರಾತ್ರಿ ಪಾಳಿಯಲ್ಲೂ ಗಣಿಗಾರಿಕೆ, ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ನಿರ್ಬಂಧವಿದ್ದರೂ ಚಲಿಸುತ್ತಿರುವ 18 ಚಕ್ರಗಳ ಘನ ವಾಹನಗಳು:-

ರಾತ್ರಿ ಪಾಳಿಯಲ್ಲೂ ಗಣಿಗಾರಿಕೆ ನಡೆಯುತ್ತಿದ್ದು, ಕಲ್ಲು, ದೂಳು ಮಿಶ್ರಿತ ಕಲ್ಲಿನ ಹುಡಿ ತುಂಬಿಕೊಂಡು 18 ಚಕ್ರಗಳ ಘನ ವಾಹನಗಳ ಮೂಲಕ ಲೋಕೋಪಯೋಗಿ ರಸ್ತೆಗಳಲ್ಲಿ ನಿರ್ಬಂಧವಿದ್ದರೂ ಅವ್ಯಾಹತವಾಗಿ ಚಲಿಸುತ್ತಿದ್ದು, ಈ ಬಗ್ಗೆ ಸಾಕಷ್ಟು ಬಾರಿ RTO ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಅಧ್ಯಾಪಕ ಸಂಕಪ್ಪ ಗೌಡ, ಬಾಲಕೃಷ್ಣ, ಪ್ರಸನ್ನ, ಮೊಯಿದ್ದೀನ್, ಅಶ್ರಫ್, ರಾಘವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News