×
Ad

ಬೆಳ್ತಂಗಡಿ : ಪೊಲೀಸರಿಂದ ತಪ್ಪಿಸಿಕೊಳ್ಳಲು ನಕ್ಸಲ್‌ ಎಂದು ಬಿಂಬಿಸಿ 112ಗೆ ಕರೆ ಮಾಡಿ ನಾಟಕ!

Update: 2023-11-22 19:24 IST

ಬೆಳ್ತಂಗಡಿ : ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾತ್ರಿ ಐದು ಜ‌ನರ ತಂಡವೊಂದು ಬಾಗಿಲು ಬಡಿದು ವಿಚಾರಿಸಿರುವ ಘಟನೆ ನ.21 ರಂದು ರಾತ್ರಿ ಕುತ್ಲೂರಿನಲ್ಲಿ ನಡೆದಿರುವ ಘಟನೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಮನೆಗೆ ಬಂದಿರುವುದು ನಕ್ಸಲ್ ಅಲ್ಲ ವಂಚನೆ ಪ್ರಕರಣದ ಆರೋಪಿ ಜೋಸಿ ಆಂಟೋನಿ ಎಂಬಾತ ಹಗಲು ಹೊತ್ತು  ಸಿಕ್ಕಿಲ್ಲ ಎಂದು ರಾತ್ರಿ ಹೊತ್ತು ಮೂಡುಬಿದಿರೆ ಪೊಲೀಸರು ಹೋಗಿದ್ದರು. ಈ ಬಗ್ಗೆ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಇರಲ್ಲಿಲ್ಲ ಎಂದು ‌ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.

ಜೋಸಿ ಆಂಟೋನಿಯ ಜಾಗವನ್ನು ಬೆಂಗಳೂರಿನ ಸುಹನಾ ಎಂಬವರು 45 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿದ್ದು ಇದರಲ್ಲಿ 24 ಲಕ್ಷ ಚೆಕ್ ನೀಡಿದ್ದರು. ಹಾಗೂ ಅದೇ ಜಾಗವನ್ನು ಬೆಂಗಳೂರಿನ ಶರತ್ ಎಂಬವರಿಗೆ 48 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿ 19 ಲಕ್ಷದ ಚೆಕ್ ಪಡೆದಿದ್ದನು. ಇಬ್ಬರಿಗೂ ಜೋಸಿ ಆಂಟೋನಿ ವಂಚನೆ ಮಾಡಿದ್ದು, ಈ ಪ್ರಕರಣದ ಬಗ್ಗೆ ಇಬ್ಬರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಜೋಸಿ ಆಂಟೋನಿ ವಿರುದ್ಧ ದೂರು ನೀಡಿದ್ದರು.

ಈ ಸಂಬಂಧ ಠಾಣೆಗೆ ಕರೆದರೆ ಬಾರದೆ ಫೋನ್ ತೆಗೆಯದೆ ಜೋಸಿ ಆಂಟೋನಿ ತಪ್ಪಿಸಿಕೊಳ್ಳುತ್ತಿದ್ದ ಇದರಿಂದಾಗಿ ಮೂಡುಬಿದಿರೆ ಪೊಲೀಸರು ರಾತ್ರಿಯ ವೇಳೆ ಆತನನ್ನು ಹುಡುಕಿ ಮನೆಗೆ ಹೋಗಿದ್ದರು.

ಮಹಿಳಾ ಪಿ.ಸಿ ಸಮೇತ ಪೊಲೀಸರು ಬಂದು ಮನೆಯ ಬಾಗಿಲು ತಟ್ಟಿದ್ದರು. ಆದರೆ ಜೋಸಿ ಆಂಟೋನಿ ಬಾಗಿಲು ತೆರೆಯಲಿಲ್ಲ. ರಾತ್ರಿಯಾದ ಕಾರಣ ಪೊಲೀಸರು ಹಿಂತಿರುಗಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮೂಡುಬಿದಿರೆ ಪೊಲೀಸರನ್ನು ನಕ್ಸಲರು ಎಂದು ಬಿಂಬಿಸಿ ವೇಣೂರು, 112 ಪೊಲೀಸರಿಗೆ ಕರೆ ಮಾಡಿ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ.

"ವೇಣೂರು ಠಾಣೆ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಜೋಸಿ ಆಂಟೋನಿ ಎಂಬಾತನ ಮನೆಗೆ, ನ.21 ರಂದು ರಾತ್ರಿ ನಕ್ಸಲರು ಭೇಟಿ ನೀಡಿರುವುದಾಗಿ ಸುದ್ದಿ ಪ್ರಸಾರವಾಗುತ್ತಿದ್ದು, ವಾಸ್ತವವಾಗಿ ಮಂಗಳೂರು ನಗರ ವ್ಯಾಪ್ತಿಯ ಪೊಲೀಸರು ದೂರು ಅರ್ಜಿ ಸಂಬಂಧವಾಗಿ, ಜೋಸಿ ಆಂಟೋನಿ ಮನೆಗೆ ಭೇಟಿ ನೀಡಿರುವುದಾಗಿದೆ".

- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News