ಸುಹಾಸ್ ಶೆಟ್ಟಿ ವಿರುದ್ಧ ರೌಡಿಶೀಟ್ ತೆರೆದಿದ್ದೇ ಬಿಜೆಪಿ ಸರಕಾರ ಎಂಬ ಪ್ರಶ್ನೆಗೆ ಬಿಜೆಪಿ ಶಾಸಕಿ ನಿರುತ್ತರ !
ಶಾಸಕಿ ಭಾಗೀರಥಿ ಮುರುಳ್ಯ
ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಖಂಡಿಸಲು ಸುದ್ದಿಗೋಷ್ಠಿ ಕರೆದಿದ್ದ ಸುಳ್ಯದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ತಡವರಿಸಿ ಸುದ್ದಿಗೋಷ್ಠಿಯನ್ನೇ ಅವಸರದಲ್ಲಿ ಮುಗಿಸಿದ ಘಟನೆ ರವಿವಾರ ಮಂಗಳೂರಿನಲ್ಲಿ ನಡೆಯಿತು.
ರವಿವಾರ ಮಧ್ಯಾಹ್ನ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಭಾಗೀರಥಿ ಮುರುಳ್ಯ ಅವರು, ಸುಹಾಸ್ ಶೆಟ್ಟಿ ಕೊಲೆಯನ್ನು ಖಂಡಿಸಿ ಮಾತನಾಡಿದರು. ಸುಹಾಸ್ ಶೆಟ್ಟಿ ಹಿಂದುತ್ವಕ್ಕಾಗಿ ಹೋರಾಡಿದ ಯುವಕ. ಆತನನನ್ನು ರೌಡಿಶೀಟರ್ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಸುಹಾಸ್ ಶೆಟ್ಟಿ ಹಿಂದುತ್ವಕ್ಕಾಗಿ ಹೋರಾಡಿದ ವ್ಯಕ್ತಿಯೆಂದು ನೀವು ಹೇಳುತ್ತಾ ಇದ್ದೀರಿ. ಆದರೆ ಆತ ಹಿಂದೂ ಯುವಕನೋರ್ವನ ಕೊಲೆ ಪ್ರಕರಣದಲ್ಲಿ 3ನೇ ಆರೋಪಿಯಾಗಿದ್ದ. ಹಿಂದೂಗಳನ್ನೇ ಕೊಂದಾತ 'ಹಿಂದೂ ಹೋರಾಟಗಾರ' ಹೇಗಾಗುತ್ತಾನೆ? ಎಂದು ಮಾಧ್ಯಮದವರು ಶಾಸಕಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ತಡವರಿಸಿದ ಭಾಗೀರಥಿ, ಆ ಬಗ್ಗೆ ಇನ್ನೊಮ್ಮೆ ಮಾಹಿತಿ ನೀಡುವೆ. ನಾನೀಗ ಕೊಲೆ ಕೃತ್ಯವನ್ನು ಖಂಡಿಸಲು ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಹೇಳಿದರು.
ಸುಹಾಸ್ ಶೆಟ್ಟಿ ಮೇಲೆ ದಲಿತ ದೌರ್ಜನ್ಯ ಪ್ರಕರಣವೂ ದಾಖಲಾಗಿದೆ. ಈ ಬಗ್ಗೆ ಏನಂತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಸಕಿ ಭಾಗೀರಥಿ ಯಾವುದೇ ಉತ್ತರ ನೀಡದೆ ಸುಮ್ಮನೇ ಇದ್ದರು.
ಸುಹಾಸ್ ಶೆಟ್ಟಿ ಹಿಂದೂ ಪರ ಹೋರಾಟಗಾರ, ಆತನನ್ನು ರೌಡಿಶೀಟರ್ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕೇಸ್ ಇದ್ದವರ ಮೇಲೆಲ್ಲಾ ರೌಡಿಶೀಟ್ ತೆರೆಯುವುದಾದರೆ ಕೆಲವು ರಾಜಕಾರಣಿಗಳ ಮೇಲೂ ಕೇಸ್ ಗಳಿವೆ, ಅವರ ಮೇಲೂ ರೌಡಿಶೀಟ್ ತೆರೆಯಬೇಕು ಎಂದು ಶಾಸಕಿ ಭಾಗೀರಥಿ ಹೇಳಿದರು.
ಈ ವೇಳೆ ಸುಹಾಸ್ ಮೇಲೆ ರೌಡಿಶೀಟ್ ತೆರೆದಿರುವುದೇ ಬಿಜೆಪಿ ಸರಕಾರದ ಅವಧಿಯಲ್ಲಿ. ಆಗ ಆರ್.ಅಶೋಕ್ ಗೃಹಸಚಿವರಾಗಿದ್ದರು ಎಂದು ಪತ್ರಕರ್ತರು ಗಮನಸೆಳೆದಾಗ, ಪ್ರತಿಕ್ರಿಯೆ ನೀಡಲು ಶಾಸಕಿ ಭಾಗೀರಥಿ ಮತ್ತೊಮ್ಮೆ ತಡವರಿಸಿದರು.
ಮಾಧ್ಯಮದವರ ಪ್ರಶ್ನೆಗಳಿಂದ ವಿಚಲಿತರಾದ ಭಾಗೀರಥಿ ಮುರುಳ್ಯ ಅವರು "ಆಯಿತು, ಮುಗಿಸುವ. ಆಗಮಿಸಿದ ಎಲ್ಲರಿಗೂ ಅಭಿನಂದನೆಗಳು" ಎಂದು ಗಡಿಬಿಡಿಯಲ್ಲಿ ಸುದ್ದಿಗೋಷ್ಠಿಯನ್ನು ಮುಗಿಸಿ ಎದ್ದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್, ಪ್ರಮುಖರಾದ ಪೂರ್ಣಿಮಾ, ಸಂಧ್ಯಾ ಉಪಸ್ಥಿತರಿದ್ದರು.