ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ನಾಗರಿಕ ಸೇವಾ ಮಾರ್ಗದರ್ಶನ ಕಾರ್ಯಾಗಾರ
ಮಂಗಳೂರು: ಇನ್ನೋಳಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್(ಬಿಕೆಸಿ)ನಲ್ಲಿ ಪಿಯುಸಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ʼನ್ಯಾವಿಗೇಟರ್ & ಪಾತ್‌ಫೈಂಡರ್ʼ ನಾಗರಿಕ ಸೇವಾ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.
ಬೆಂಗಳೂರಿನ ಬಿಎಂಟಿಸಿಯ ಭದ್ರತೆ ಮತ್ತು ವಿಜಿಲೆನ್ಸ್ ನಿರ್ದೇಶಕರಾಗಿರುವ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಪುತ್ತಿಗೆ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಾಮಾಣಿಕತೆ ಮತ್ತು ವೈಯಕ್ತಿಕ ಹೊಣೆಗಾರಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಷ್ಟಪಟ್ಟು ಸಾಧನೆಗಳನ್ನು ಮಾಡುವ ಮೂಲಕ ಕುಟುಂಬ ಹೆಮ್ಮೆ ಪಡುವಂತೆ ಮಾಡಬೇಕು ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ವಿದ್ಯಾರ್ಥಿಗಳು ಹಣದ ಹಿಂದೆ ಹೋಗಬಾರದು ಬದಲಾಗಿ ತಮ್ಮ ಕೆಲಸದ ಮೇಲೆ ಗಮನಹರಿಸಬೇಕು. ಸತತ ಪ್ರಯತ್ನದಿಂದ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು.
ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಪ್ರಾಂಶುಪಾಲ ಡಾ.ಎಸ್.ಐ. ಮಂಝೂರ್ ಬಾಷಾ ಸ್ವಾಗತಿಸಿದರು. ಬ್ಯಾರೀಸ್ ಶಿಕ್ಷಣ ಮತ್ತು ವಿಜ್ಞಾನ ಸಂಸ್ಥೆಯ (ಬಿಐಇಎಸ್) ಪ್ರಾಂಶುಪಾಲ ಡಾ.ಅಝೀಜ್ ಮುಸ್ತಫಾ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕ ಮಿಯಾಝ್ ಕಾರ್ಯಾಗಾರವನ್ನು ನಿರೂಪಿಸಿದರು.