×
Ad

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡಲು ಕಾಂಗ್ರೆಸ್ ಸರ್ಕಾರ ನೇರ ಕಾರಣ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

Update: 2025-05-29 15:03 IST

ಮಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಪ್ರತಿ ಸಂಧರ್ಭದಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುತ್ತದೆ. ಓಲೈಕೆ ರಾಜಕಾರಣ, ಪೊಲೀಸ್ ಇಲಾಖೆಯಲ್ಲಿ ಅತಿಯಾದ ಹಸ್ತಕ್ಷೇಪ, ಸಮಾಜಘಾತುಕ ಶಕ್ತಿಗಳ ಪೋಷಣೆಯಿಂದಾಗಿ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ಕದಡಲು ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಆರೋಪಿಸಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಹಾಸ್ ಶೆಟ್ಟಿ ಹತ್ಯೆ ಸಂಧರ್ಭದಲ್ಲಿ ರಾಜ್ಯದ ಗೃಹ ಸಚಿವರು ಒಂದು ಸಮುದಾಯದ ನಾಯಕರ ಬಳಿ ಸಭೆ ನಡೆಸಿದ್ದಾರೆ. ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಪದೇಪದೇ ಸುಹಾಸ್ ಶೆಟ್ಟಿ ಯನ್ನು ರೌಡಿಶೀಟರ್ ಎನ್ನುತ್ತಾ ಅಲ್ಪಸಂಖ್ಯಾತರನ್ನು ಸಂತೋಷಪಡಿಸಲು ಪ್ರಯತ್ನಿಸಿದ್ದಾರೆ. ಸುಹಾಸ್ ಶೆಟ್ಟಿ ಅಂತಿಮ ಯಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲೆಯ ಬಿ.ಜೆ.ಪಿ. ನಾಯಕರು, ಶಾಸಕರು, ಹಿಂದು ಸಂಘಟನೆಯ ಪ್ರಮುಖರು ಕಾಳಜಿ ವಹಿಸಿದ್ದರು. ಆದರೂ ಹಿಂದೂ ನಾಯಕರಾದ ಶರಣ್ ಪಂಪವೆಲ್, ಬುಜಂಗ ಕುಲಾಲ್ ರವರನ್ನು ಬಂಧಿಸಲಾಯಿತು. ಸರ್ಕಾರದ ಇಂತಹ ತಾರತಮ್ಯ ಇಬ್ಬಗೆ ನೀತಿಯಿಂದ ಜಿಲ್ಲೆಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಕೂತು ಜಿಲ್ಲೆಯ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದೆ ಮಾತನಾಡುವ ಬದಲು ಇಲ್ಲಿನ ವಾಸ್ತವ ಅರಿತು ಜವಾಬ್ದಾರಿಯಿಂದ ಮಾತನಾಡಲಿ. ನಿನ್ನೆ ಅಘೋಷಿತ ಬಂದ್ ಮಾಡಿ ದಾರಿಯುದ್ದಕ್ಕೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿರುವವರ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ. ಹಿಂದೂ ನಾಯಕರಿಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಪೊಲೀಸ್ ಇಲಾಖೆಯ ಮೇಲೆ ಕಾಂಗ್ರೆಸ್ ಸರ್ಕಾರದ ಒತ್ತಡವೇ ಕಾರಣ. ಕಾಂಗ್ರೆಸ್ ನ ಮುಸ್ಲಿಂ ನಾಯಕರು ರಾಜೀನಾಮೆ ನೀಡುತ್ತಿರುವುದು ಒಂದು ಪ್ರಹಸನ. ಇದು ಹಿಂದುಗಳ ಮೇಲೆ ಮತ್ತಷ್ಟು ದೌರ್ಜನ್ಯ ಎಸೆಗಲು ಸರ್ಕಾರಕ್ಕೆ ಮಾಡುತ್ತಿರುವ ಒತ್ತಡದ ಭಾಗವಾಗಿದೆ ಎಂದು  ಹೇಳಿದ್ದಾರೆ.

ಅಧಿಕಾರದ ಅಮಲಿನಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಶೋಚನೀಯವಾಗಿದೆ. ಸಾಮರಸ್ಯದ ಬದುಕು ಮರೀಚಿಕೆಯಾಗಿದೆ. ಇನ್ನಾದರೂ ರಾಜ್ಯದ ಗೃಹಸಚಿವರು ಪೊಲೀಸ್ ಇಲಾಖೆಗೆ ನಿಷ್ಪಕ್ಷಪಾತವಾಗಿ, ಒತ್ತಡ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News