ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರ ಮಳೆ; ವ್ಯಾಪಕ ಹಾನಿ
ಬೆಳ್ತಂಗಡಿ: ತಾಲೂಕಿನಾದ್ಯಂತ ಶನಿವಾರ ಬೆಳಗ್ಗಿನ ವರೆಗೂ ನಿರಂತರವಾಗಿ ಮಳೆ ಸುರಿದಿದ್ದು ವ್ಯಾಪಕ ಹಾನಿ ಸಂಭವಿಸಿದೆ.
ಇಳಂತಿಲ, ಬಂದಾರು, ನಡ,ತೆಕ್ಕಾರು ಪರಿಸರದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತಗಳಾಗಿದೆ. ಹಲವು ಮನೆಗಳಿಗೆ ಹಾನಿ ಸಂಭವಿಸಿದ್ದು ರಸ್ತೆಗೆ ಗುಡ್ಡ ಕುಸಿದು ಬಿದ್ದು ರಸ್ತೆಗಳು ಬಂದ್ ಆಗಿದೆ.
ಬಂದಾರು ಗ್ರಾಮದ ಶಿವನಗರ ಪೆರ್ಲಬೈಪಾಡಿ ರಸ್ತೆಯ ಬೋಲೋಡಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. ಇಲ್ಲಿ ಕಳೆದ ಮಳೆಗಾಲದಲ್ಲಿಯೂ ಗುಡ್ಡ ಕುಸಿದಿತ್ತು.
ಮುರ್ತಾಜೆ ಸೇಸಪ್ಪ ಪೂಜಾರಿ ಎಂಬವರ ಕೋಳಿ ಶೆಡ್ ಮೇಲೆ ಗುಡ್ಡ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಬಂದಾರು ಗ್ರಾಮದ ಮುರ್ತಾಜೆ ಬಳಿ ಸಂಪರ್ಕ ರಸ್ತೆಯೊಂದು ಕುಸಿತವಾಗಿ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ಇಳಂತಿಲ ಗ್ರಾಮದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ ಸಂಭವಿಸಿದೆ. ಇಲ್ಲಿನ ನಿವಾಸಿ ಸಿದ್ದಿಕ್ ಅವರ ಮನೆಯ ಹಿಂದಿನ ಗುಡ್ಡೆ ಕುಸಿದು ಬಿದ್ದಿದೆ. ಮನೆಗೆ ಮಣ್ಣು, ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಇಳಂತಿಲ ಹಾರೆಕೆರೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಇಳಂತಿಲದ ಸುಲೈಮಾನ್ ಎಂಬವರ ಮನೆಯ ಪಕ್ಕದ ಗುಡ್ಡ ಕುಸಿದು ಬಿದ್ದಿದ್ದು, ಮನೆಗೆ ಹಾನಿಯಾಗಿದೆ ಗುಡ್ಡ ಇನ್ನೂ ಕುಸಿಯುವ ಭೀತಿಯಿದ್ದು, ಮನೆಯವರನ್ನು ಸ್ಥಳಾಂತರಗೊಳಿಸಲಾಗಿದೆ.
ಲಾಯಿಲ ಗ್ರಾಮದ ಅಂಕಾಜೆ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಾರ್ಯ ಗ್ರಾಮದ ಸೋಕಿಲ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ನಡ ಗ್ರಾಮದ ಸುರ್ಯಕುಮೇರು ರಸ್ತೆಬದಿಯಲ್ಲಿ ಗುಡ್ಡ ಕುಸಿದು ಬಿದ್ದಿದೆ. ನಡ ನೆಕ್ಕರೆ ಎಂಬಲ್ಲಿ ವಿಶ್ವನಾಥ ಗೌಡ ಎಂಬವರ ಮನೆಯ ಪಕ್ಕದ ಗುಡ್ಡ ಕುಸಿದಿದ್ದು, ಮನೆಗೆ ಹಾನಿ ಸಂಭವಿಸಿದೆ. ನಡ ಕೊಯ್ಯ ಗುಡ್ಡೆಯಿಂದ ಸುರುಂಟೆಗೆ ಹೋಗುವ ರಸ್ತೆಯಲ್ಲಿ ಮೋರಿ ಕುಸಿದು ಬಿದ್ದಿದೆ. ಬಾರ್ಯ ಗ್ರಾಮದ ಅಶ್ರಫ್ ಎಂಬವರ ಮನೆಗೆ ಗುಡ್ಡ ಕುಸಿದು ಹಾನಿ ಸಂಭವಿಸಿದೆ.
ಶನಿವಾರ ಬೆಳಗ್ಗಿನಿಂದ ಮಳೆ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.