×
Ad

ಮನಪಾ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ

Update: 2025-01-04 18:52 IST

ಆನಂದ್ ಸಿ.ಎಲ್ - ಅಬ್ದುಲ್ ರವೂಫ್‌

ಮಂಗಳೂರು, ಜ.4: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಪಾಲಿಕೆಯ ಹಿರಿಯ ಸದಸ್ಯ ಅಬ್ದುಲ್ ರವೂಫ್‌ ಅವರು ಪಾಲಿಕೆಯ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಲ್ಲದೆ, ತನ್ನ ಆರೋಪ ಸುಳ್ಳಾಗಿದ್ದಲ್ಲಿ ನಿವೃತ್ತಿ ಘೋಷಣೆ ಮಾಡುವುದಾಗಿ ಹೇಳಿದ ಘಟನೆ ಶನಿವಾರ ನಡೆಯಿತು.

ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷದ ಸದಸ್ಯ ಅಬ್ದುಲ್ ರವೂಫ್‌ರವರು ಪಾಲಿಕೆಯ ಆಯುಕ್ತರ ವಿರುದ್ಧ ಹಲವು ಆರೋಪಗಳ ಸುರಿಮಳೆಯನ್ನು ಹರಿಸುತ್ತಿದ್ದಾಗ ಪಾಲಿಕೆಯ ಆಡಳಿತ ಹಾಗೂ ವಿಪಕ್ಷದ ಇತರ ಸದಸ್ಯರೆಲ್ಲರೂ ವಿರೋಧ, ಆಕ್ಷೇಪವೆತ್ತದೆ ಮೌನವಾಗಿದ್ದರು.

ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಆನಂದ್ ಸಿ.ಎಲ್. ಅವರು, ನಾನು ಸಾರ್ವಜನಿಕ ಅಧಿಕಾರಿ. ಯವುದೇ ಸಂದರ್ಭದಲ್ಲಿಯೂ ತನಿಖೆಗೆ ಸಿದ್ಧನಿರುತ್ತೇನೆ ಎಂದು ಸವಾಲು ಹಾಕಿದರು.

ತನ್ನ ಮಾತಿನ ಆರಂಭದಲ್ಲೇ ಸದಸ್ಯ ಅಬ್ದುಲ್ ರವೂಫ್‌ರವರು, ತಾನು ದಾಖಲೆ ಸಹಿತ ಮಾತನಾಡುತ್ತಿದ್ದು, ಆಯುಕ್ತರು ಪಾಲಿಕೆಯ ಸದಸ್ಯರನ್ನು ಕತ್ತಲೆಯಲ್ಲಿಟ್ಟು 2001ರಿಂದೀಚೆಗೆ ನಿಯಮ ಮೀರಿ ಕಟ್ಟಲ್ಪಟ್ಟ ವಸತಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳಿಗೆ ತಡೆಹಿಡಿಯಲಾಗಿದ್ದ ಕಂಪ್ಲೀಷನ್ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದರು.

ಕಳೆದ ಹಲವು ವರ್ಷಗಳಲ್ಲಿ ಪಾಲಿಕೆಗೆ ಐಎಎಸ್ ಸೇರಿದಂತೆ ಹಲವು ಆಯುಕ್ತರು ಬಂದು ಹೋಗಿದ್ದಾರೆ. ಅವರೆಲ್ಲರಿಂದಲೂ ನಿಯಮ ಮೀರಿದ ಕಟ್ಟಡಗಳಿಗೆ ದೊರಕದ ಅನುಮತಿ ಪತ್ರ ಈಗಿನ ಆಯುಕ್ತರಿಂದ ನೀಡಲಾಗಿದೆ. ಕೆಲವೊಂದು ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಇನ್ನು ಕೆಲವು ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಅಂತಹ ಕಟ್ಟಡಗಳಿಗೂ ಪೂರ್ಣ ಪ್ರವೇಶಪತ್ರವನ್ನು ಯಾವ ಆಧಾರದಲ್ಲಿ ನೀಡಿದ್ದಾರೆ, ಇದು ಭ್ರಷ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದರು.

ಇಬ್ಬರು ಎಇಇ, ಇಬ್ಬರು ಜೆಇ ಅಧಿಕಾರಿಗಳಿಗೆ 29 ದಿನ ಚಾರ್ಜ್ ನೀಡದೆ ಸತಾಯಿಸಿದ್ದಾರೆ ಎಂದೂ ಆರೋಪಿಸಿದ ಅಬ್ದುಲ್‌ ರವೂಫ್, ಪಾಲಿಕೆಯಲ್ಲಿ 30 ವರ್ಷಗಳ ಅನುಭವ ಇರುವ ಜೆಇ, ಎಇಇಗಳನ್ನು ಬಿಟ್ಟು ಡೆಪ್ಯುಟೇಶನ್ ಮೇಲೆ ಬಂದವರಿಗೆ ಸೀನಿಯರ್ ಎಂಜಿನಿಯರ್ ಚಾರ್ಜ್ ನೀಡಿದ್ದಾರೆ. ಇದರಲ್ಲಿ ಯಾವ ಉದ್ದೇಶ ಇತ್ತು ಎಂದು ಪ್ರಶ್ನಿಸಿದರು.

ವಿವಿಧ ಕಾಮಗಾರಿಗಳಿಗೆ ಪಾಲಿಕೆಯಲ್ಲಿ ಕೇವಲ 60 ಕೋಟಿ ರೂ. ಹಣ ಇರುವುದು ಗೊತ್ತಿದ್ದೂ 160 ಕೋಟಿ ರೂ.ಗಳನ್ನು ಆಯುಕ್ತರು ಮಂಜೂರು ಮಾಡಿಸಿದ್ದಾರೆ. ತುರ್ತು ಕಾಮಗಾರಿಗಳಿಗೆ 5 ಲಕ್ಷ ರೂ.ವರೆಗೆ ರಿಯಾಯಿತಿ ಇದೆ. ಆದರೆ ಆಯುಕ್ತರು ಅದನ್ನು ಮೀರಿ ಹೆಚ್ಚಿನ ಕಾಮಗಾರಿಗಳಿಗೆ ಇ-ಟೆಂಡರ್ ಆದೇಶ ಮಾಡಿದ್ದಾರೆ ಎಂದು ದೂರಿದರು.

ಈ ಸಂದರ್ಭ ಆಯುಕ್ತರು ದಾಖಲೆ ಇದ್ದರೆ ಕೊಡಿ, ಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿದಾಗ, ನಾನು ಮೇಯರ್ ಬಳಿ ಮಾತನಾಡುತ್ತಿದ್ದು, ದಾಖಲೆಯೊಂದಿಗೇ ಬಂದಿದ್ದೇನೆ. ದಾಖಲೆಗಳನ್ನು ಮೇಯರ್‌ಗೆ ನೀಡುವುದಾಗಿ ಹೇಳಿ ದಾಖಲೆಗಳ ಪ್ರತಿಗಳನ್ನು ಮೇಯರ್‌ಗೆ ಸಲ್ಲಿಸಿದರು.

ಆಯುಕ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಹಾದಿ ಬೀದಿಯಲ್ಲಿ ಕೂಡ ಜನರು ಮಾತನಾಡುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿ ಪಾಲಿಕೆಗೆ ಅಗತ್ಯವಿಲ್ಲ, ಅವರ ವಿರುದ್ಧ ತನಿಖೆಗೆ ಸರಕಾರಕ್ಕೆ ಬರೆಯಬೇಕೆಂದು ಅಬ್ದುಲ್ ರವೂಫ್ ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯುಕ್ತ ಆನಂದ್ ಸಿ.ಎಲ್., ಜೆಇ, ಎಇಇಗಳ ಕುರಿತಾದ ವಿಷಯದಲ್ಲಿ ನಿಯಮಾನುಸಾರವೇ ಕ್ರಮ ವಹಿಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಬಹುದು. ಆಗಿನ ಮೇಯರ್ ಮತ್ತು ವಿಪಕ್ಷ ನಾಯಕರು ಚುನಾವಣೆಯ ಸಂದರ್ಭದಲ್ಲಿ ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿಯೇ ಬಜೆಟ್‌ಗೆ ಮೀರಿ ಹೆಚ್ಚಿನ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಒಂದು ಲಕ್ಷ ಮೀರಿದ ಕಾಮಗಾರಿಗಳಿಗೆ ಕೆಟಿಪಿಪಿ ಕಾಯ್ದೆಯ ಅನುಸಾರ ಟೆಂಡರ್ ಕರೆಯಲಾಗಿದೆ. ಇಂತಹ ಕ್ರಮಗಳಿಂದ ಗುತ್ತಿಗೆದಾರರಿಗೆ ತೊಂದರೆ ಆಗಿರಬಹುದೇ ಹೊರತು ಪಾಲಿಕೆಗೆ ಆಗಿಲ್ಲ. ಒಳಚರಂಡಿ ಕೆಲಸಗಳಿಗೆ ಸದಸ್ಯರು ವಿನಾಯಿತಿ ನೀಡುವಂತೆ ಕೋರಿಕೊಂಡ ಮೇರೆಗೆ ತುರ್ತು ಕಾಮಗಾರಿಯಡಿ ವಿನಾಯಿತಿ ನೀಡಿ ಇ ಟೆಂಡರ್ ಕರೆಯಲಾಗಿದೆ. ಇದಕ್ಕೂ ದಾಖಲೆ ಇದ್ದು ಸದಸ್ಯರು ಪರಿಶೀಲಿಸಬಹುದು ಎಂದರು.

ಈ ಸಂದರ್ಭ ಮತ್ತೆ ಆಕ್ಷೇಪವೆತ್ತಿದ ಸದಸ್ಯ ಅಬ್ದುಲ್ ರವೂಫ್ ತನಿಖೆಗೆ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದಾಗ, ಮೇಯರ್ ಮನೋಜ್ ಕೋಡಿಕಲ್ ಪತ್ರ ಬರೆಯುವುದಾಗಿ ಹೇಳಿದರು.

ಸ್ವಯಂಘೋಷಿತ ಆಸ್ತಿ ತೆರಿಗೆ ಏರಿಕೆ ಇಳಿಕೆ: ಸದಸ್ಯರ ವಾಗ್ವಾದ

ಮಂಗಳೂರು ಮಹಾನಗರ ಪಾಲಿಕೆಯ ಸ್ವಯಂಘೋಷಿತ ಆಸ್ತಿ ತೆರಿಗೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ ಯಾದರೂ ಪಾಲಿಕೆ ಸಾಪ್ಟ್‌ವೇರ್‌ನಲ್ಲಿ ಮಾತ್ರ ಇದು ಇನ್ನೂ ಬದಲಾಗಿಲ್ಲ. ಇದಕ್ಕೆ ಕ್ರಮ ವಹಿಸಬೇಕು ಎಂದಾಗ, ಎ.ಸಿ. ವಿನಯ್‌ರಾಜ್ ಮಾತನಾಡಿ, ಒಮ್ಮೆ ತೆರಿಗೆ ಏರಿಕೆ ಮಾಡಿದ ಮೇಲೆ ಮತ್ತೆ ಅದರಲ್ಲಿ ಬದಲಾವಣೆ ತರಲು ಕಾನೂನು ಸಲಹೆಯ ಅಗತ್ಯವಿದೆ ಎಂದರು. ಈ ಬಗ್ಗೆ ಆಕ್ಷೇಪಿಸಿದ ಪ್ರೇಮಾನಂದ ಶೆಟ್ಟಿ, ‘ತೆರಿಗೆ ಏರಿಕೆಯಾಗಿರುವುದನ್ನು ತಪ್ಪಿಸಿ ಜನರಿಗೆ ಉಪಕಾರ ಮಾಡುವ ಕಾಲದಲ್ಲಿ ಕಾಂಗ್ರೆಸ್ ಆಯುಕ್ತರ ಮೂಲಕ ಕಾನೂನಾತ್ಮಕ ತೊಡಕು ಬಗ್ಗೆ ಹೇಳುವುದು ಸರಿಯಲ್ಲ’ ಎಂದರು.

ಈ ವಿಷಯದಲ್ಲಿ ಕೆಲ ಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಮೇಯರ್ ಮನೋಜ್ ಕುಮಾರ್, ತೆರಿಗೆ ಬದಲಾವಣೆ ಆಗಿರುವುದನ್ನು ಕಂಪ್ಯೂಟರ್‌ನಲ್ಲಿ ದಾಖಲೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News