×
Ad

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಶೀಘ್ರದಲ್ಲೇ ರಾಜ್ಯಪಾಲರು, ಸಿಎಂ, ಸಿಜೆ ಬಳಿಗೆ ನಿಯೋಗ

Update: 2025-05-26 20:01 IST

ಮಂಗಳೂರು: ಮಂಗಳೂರಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಮಂಗಳೂರಿನಿಂದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ನೂರು ಮಂದಿಯ ನಿಯೋಗ ಶೀಘ್ರದಲ್ಲೇ ಕರ್ನಾಟಕದ ರಾಜ್ಯಪಾಲರು, ಮುಖ್ಯ ಮಂತ್ರಿ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್‌ನ ಆಡಳಿತ ನ್ಯಾಯಮೂರ್ತಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕ ಐವನ್ ಡಿ ಸೋಜ ತಿಳಿಸಿದ್ದಾರೆ.

ನಗರದಲ್ಲಿ ಹೈಕೋರ್ಟ್ ಹೋರಾಟ ಸಮಿತಿಯ ವತಿಯಿಂದ ನಡೆದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಡೆದ ಸಮಾಲೋಚನ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಧಾರವನ್ನು ಪ್ರಕಟಿಸಿದರು.

ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ತೆರಳಲಿರುವ ನಿಯೋಗದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಶೇ ೮೦ರಷ್ಟು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಹೈಕೋರ್ಟ್ ಪೀಠ ಸ್ಥಾಪನೆಗೆ ಮಂಗಳೂರಿನಲ್ಲಿ ಎಲ್ಲ ಅನುಕೂಲತೆಗಳು ಇವೆ. ಇಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ , ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತುಂಬಾ ಅನುಕೂಲವಾಗಲಿದೆ. ಹೈಕೋರ್ಟ್ ಪೀಠ ಸ್ಥಾಪನೆಗೆ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳ ಹಳೆಯ ಕಚೇರಿಯನ್ನು ಮೀಸಲಿರಿಸುವಂತೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಹೈಕೋರ್ಟ್ ಪೀಠಕ್ಕೆ ಆಗ್ರಹಿಸಿ ಕರಾವಳಿ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸರಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ಪತ್ರ ಬರೆದು ಆಗ್ರಹಿಸಲಿದ್ದಾರೆ. ಅಲ್ಲದೆ ಒಂದು ಲಕ್ಷ ವಿದ್ಯಾರ್ಥಿಗಳು ‘ ಇಲ್ಲಿನ ಸಾರ್ವಜನಿಕರಿಗೆ ಹೈಕೋರ್ಟ್ ಪೀಠದ ಅಗತ್ಯತೆ ಇದೆ. ಹೈಕೋರ್ಟ್ ಪೀಠ ಸ್ಥಾಪನೆ ನಮ್ಮ ಹಕ್ಕು’ ಎಂಬ ನಿಟ್ಟಿನಲ್ಲಿ ಸಂಚಾರಿ ಪೀಠ ರಚನೆಗೆ ಆಗ್ರಹಿಸಿ ರಾಜ್ಯದ ರಾಜ್ಯಪಾಲರು, ಮುಖ್ಯ ಮಂತ್ರಿ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರಿಗೆ ಅಂಚೆ ಕಾರ್ಡ್‌ನಲ್ಲಿ ಪತ್ರ ಬರೆದು ಆಗ್ರಹಿಸಲಿದ್ದಾರೆ ಎಂದು ಐವನ್ ಡಿ ಸೋಜ ತಿಳಿಸಿದರು.

ಸಾರ್ವಜನಿಕರ ಬೇಡಿಕೆ ಮತ್ತು ಅವರಿಗೆ ಪ್ರಯೋಜವಾಗುವುದಿದ್ದರೆ ರಾಜ್ಯಪಾಲರ ಅನುಮತಿ ಪಡೆದು ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಹೈಕೋರ್ಟ್‌ನ ಸಂಚಾರಿ ಪೀಠ ಸೃಷ್ಠಿಸುವ ಅವಕಾಶ ಇದೆ ಎಂದು ಅವರು ಹೇಳಿದರು.

ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಬಂಧಿಸಿ ಸಾರ್ವಜನಿಕರ ನೆರವಿನಲ್ಲಿ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಹೋರಾಟವನ್ನು ಜನಪರ ಹೋರಾಟವನ್ನಾಗಿ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಕಚೇರಿಯನ್ನು ಪ್ರಾರಂಭಿಸಲಾಗುವುದು. ಕರಾವಳಿ ಭಾಗದ ಹಿರಿಯ ವಕೀಲರು, ಕಾರ್ಮಿಕ ಮುಖಂಡರು, ಆಟೋ ರಿಕ್ಷಾ ಚಾಲಕರ ಸಂಘ, ಬಸ್ ಮಾಲಕರ ಸಂಘ, ಶಿಕ್ಷಣ ಸಂಸ್ಥೆಗಳ , ವಿದ್ಯಾರ್ಥಿ ಸಂಘಟನೆಗಳ ,ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿ ಹೋರಾಟಕ್ಕೆ ಬೆಂಬಲ ಯಾಚಿಸಲಾಗಿದೆ. ದ.ಕ. ಮೂಲದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಿವೃತ್ತ ಹಾಗೂ ಹಾಲಿ ನ್ಯಾಯಾಧೀಶರನ್ನು ಭೇಟಿಯಾಗಿ ಅವರ ಇದಕ್ಕೆ ಸಂಬಂಧಿಸಿ ಅಭಿಪ್ರಾಯ ಪಡೆಯಲಾಗುವುದು ಎಂದು ಐವನ್ ಡಿ ಸೋಜ ವಿವರಿಸಿದರು.

ಕರಾವಳಿ ಭಾಗದ ಸುಮಾರು ಶೇ ೪೦ಕ್ಕೂ ಅಧಿಕ ಪ್ರಕರಣಗಳು ರಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ರಚನೆಯಾದರೆ ಏಳು ಜಿಲ್ಲೆಯವರಿಗೆ ಹೆಚ್ಚು ಪ್ರಯೋಜನವಾಗಲಿದೆ. ಬೆಳೆಯುತ್ತಿರುವ ಮಂಗಳೂರಿನಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯದಾನ ದೊರೆಯಲಿದೆ. ಏಳು ಕಾನೂನು ಕಾಲೇಜುಗಳು ದ.ಕ. ಜಿಲ್ಲೆಯಲ್ಲಿರುವುದರಿಂದ ಅಲ್ಲಿ ಕಲಿತವರಿಗೆ ತಮ್ಮ ಉಜ್ವಲ ಭವಿಷ್ಯ ರೂಪಿಸಲು ಅನುಕೂಲವಾಗಲಿದೆ ಎಂದು ಐವನ್ ಡಿ ಸೋಜ ವಿವರಿಸಿದರು.

ಆಂಧ್ರಪ್ರದೇಶದ ರಾಜ್ಯಪಾಲರು ಮತ್ತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅಬ್ದುಲ್ ನಜೀರ್ ಅವರನ್ನು ಈಗಾಗಲೇ ಭೇಟಿಯಾಗಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ. ಅವರು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.


ಸುದ್ದಿಗೋಷ್ಠಿಯಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ವಿ. ರಾಘವೇಂದ್ರ , ಮಾಜಿ ರಾಜ್ಯ ಸಭಾ ಸದಸ್ಯ ಬಿ. ಇಬ್ರಾಹೀಂ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್‌, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಟಿ. ನಾರಾಯಣ ಪೂಜಾರಿ, ಪ್ರಥ್ವಿರಾಜ ರೈ , ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕ್ರಾಸ್ತಾ, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ಹರೀಶ್ ಮೂಡಬಿದ್ರೆ,ಮಾಜಿ ಅಧ್ಯಕ್ಷ ಕೆ. ಆರ್.ಪಂಡಿತ್ , ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಆನಂದ ಜಿ ಪೈ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು,ಬಸ್ ಮಾಲಕರ ಸಂಘ ದ ಅಜೀಜ್ ಪರ್ತಿಪ್ಪಾಡಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

12 ವರ್ಷಗಳ ಹೋರಾಟದ ಫಲ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆ ನ್ಯಾಯೋಚಿತವಾಗಿದೆ. ಸರಕಾರ ಮನಸ್ಸು ಮಾಡಿದರೆ ಒಂದು ಅಥವಾ ಎರಡು ತಿಂಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲು ಸಾಧ್ಯ. 12 ವರ್ಷಗಳ ಹೋರಾಟದ ಫಲವಾಗಿ ಧಾರವಾಡದಲ್ಲಿ ಉಚ್ಚ ನ್ಯಾಯಾಲಯದ ಹೈಕೋರ್ಟ್ ಪೀಠ ಸ್ಥಾಪನೆಯಾಗಿದೆ.

-ಬಿ.ಡಿ.ಹಿರೇಮಠ್, ಧಾರವಾಡ ಹೈಕೋರ್ಟ್ ಪೀಠ ಹೋರಾಟದ ರೂವಾರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News