×
Ad

ಹಿಂದಿನ ಪರಿಶಿಷ್ಟ ಜಾತಿ ಪಟ್ಟಿ ಪ್ರಕಾರ ಒಳಮೀಸಲಾತಿಗೆ ಆಗ್ರಹ

Update: 2025-05-20 14:20 IST

ಮಂಗಳೂರು, ಮೇ 20: ರಾಜ್ಯದ ಪರಿಶಿಷ್ಟ ಜಾತಿಗಳವರಿಗೆ ಒಳ ಮೀಸಲಾತಿಗಾಗಿ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್‌ದಾಸ್ ಅವರ ಆಯೋಗ ನಡೆಸುತ್ತಿರುವ ಸಮೀಕ್ಷೆಯ ಸಂದರ್ಭ ಈ ಹಿಂದಿನ ಸಂವಿಧಾನ ಬದ್ಧವಾಗಿ ನಿಗದಿಪಡಿಸಲಾದ 101 ಉಪಜಾತಿಗಳ ಪಟ್ಟಿಯ ಪ್ರಕಾರವೇ ಒಳ ಮೀಸಲಾತಿ ಒದಗಿಸಬೇಕು. ಜಾತಿ ನಿಂದಕ ಶಬ್ಧಗಳಾದ ‘ಮನ್ಸ’ ಅಥವಾ ‘ದಿಕ್ಕ’ಎಂಬ ಪದಗಳು ಉಪ ಜಾತಿಗಳಲ್ಲ. ಈ ಪದಗಳನ್ನು ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗೆ ಮನ್ನಣೆ ನೀಡಬಾರದು ಎಂದು ಜಿಲ್ಲಾ ಆದಿ ದ್ರಾವಿಡ ಸಮನ್ವಯ ಸಮಿತಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಎಂ. ಸೀನ ಮಾಸ್ತಿಕಟ್ಟೆ, ಈ ಮೇಲಿನ ಪದಗಳು ತುಳುನಾಡಿಲ್ಲಿ ಜಾತಿ ನಿಂದನಾ ಶಬ್ದಗಳಾಗಿವೆ. ಯಾವುದೇ ಸರಕಾರ ಕಡತಗಳಲ್ಲಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಜಾತಿಗಳ ಉಲ್ಲೇಖವಿಲ್ಲ ಎಂದು ಹೇಳಿದರು.

ಜಾತಿ ಪಟ್ಟಿಗೆ ಸೇರ್ಪಡೆ ಮಾಡುವ ಅಥವಾ ತೆರವುಗೊಳಿಸುವ ಅಧಿಕಾರ ಲೋಕಸಭೆ ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧಿಕಾರ ವ್ಯಾಪ್ತಿಗೊಳಪಟ್ಟಿದೆ. ಮನ್ಸ ಸಂಘದ ಸಮಿತಿಯ ಅಧ್ಯಕ್ಷರು ಮನ್ಸ ಸಮಾಜವು ಕರಾವಳಿ ಭಾಗದಲ್ಲಿ ಸುಮಾರು 5 ಲಕ್ಷ ಜನ ಇರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ತಮ್ಮ ಗುಂಪಿನಲ್ಲಿ ಐದು ಲಕ್ಷ ಜನ ಸದಸ್ಯರನ್ನು ಸಾಬೀತು ಪಡಿಸಲು ನಾವು ಬಹಿರಂಗ ಸವಾಲು ಹಾಕುತ್ತಿದ್ದೇವೆ. ಈ ರೀತಿ ಗೊಂದಲ ಸೃಷ್ಟಿಸುವ ಪ್ರಕ್ರಿಯೆ ಮುಂದುವರಿದಲ್ಲಿ ಕಾನೂನು ಕ್ರಮ ವಹಿಸಲಾಗುವುದು. ಈ ಬೇಡಿಕೆಗೆ ಮನ್ನಣೆ ನೀಡಿದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮೇ 28ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಕರಾವಳಿ ಭಾಗದಲ್ಲಿ ಆದಿ ದ್ರಾವಿಡ ಸಮಾಜದವರು ಈ ಜಾತಿ ನಿಂದಕ ಶಬ್ಧ ಸೇರ್ಪಡೆಯ ಬೇಡಿಕೆಯ ಬಗ್ಗೆ ಆಕ್ರೋಶಿತರಾಗಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸರಕಾರಿ ಉದ್ಯೋಗಿಗಳು, ರಾಜಕಾರಣಿಗಳಿಗೆ ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಜಾತಿಗೆ ಸೇರಿದವರಿಗೆ ಸರಕಾರಿ ಸವಲತ್ತು ಪಡೆಯಲು ತೊಂದರೆಯಾಗಲಿದೆ. ಇದು ಆದಿ ದ್ರಾವಿಡ ಸಮುದಾಯಕ್ಕೆ ಮಾಡುವ ಅನ್ಯಾಯವಾಗಿರುತ್ತದೆ. ಇದೇ ವೇಳೆ ಅನುಬಂಧ 2 ಬಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಆದಿ ದ್ರಾವಿಡ ಪರಿಶಿಷ್ಟ ಜಾತಿಯ ಉಪ ಜಾತಿಗಳನ್ನು ಕೈಬಿಡಲಾಗಿದ್ದು, ಇದು ಈ ಜಾತಿಗಳವರಿಗೆ ಮಾಡಿದ ಅನ್ಯಾಯ ಹಾಗೂ ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಆದ್ದರಿಂದ ಹಿಂದಿನ 101 ಪರಿಶಿಷ್ಟ ಜಾತಿ ಪಟ್ಟಿ ಪ್ರಕಾರವೇ ಒಳ ಮೀಸಲಾತಿ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಪ ಸಂಚಾಲಕ ಎಸ್.ಪಿ. ಆನಂದ, ಜಿಲ್ಲಾ ಕಾರ್ಯದರ್ಶಿ ಜಿನ್ನಪ್ಪ ಬಂಗೇರ, ಜತೆ ಕಾರ್ಯದರ್ಶಿ ಸುರೇಶ್ ಬಳ್ಳಾಲ್‌ಬಾಗ್, ಜಿಲ್ಲಾ ಸಂಘಟನಾ ಸಂಚಾಲಕ ಜಗದೀಶ್ ಪಾಂಡೇಶ್ವರ,ಕಾರ್ಯಕಾರಿ ಸಮಿತಿ ಸದ್ಯರಾದ ಲಕ್ಷ್ಮಣ, ನವೀನ್ ಬಳ್ಳಾಲ್‌ಬಾಗ್ ಮೊದಲಾದವರು ಉಪಸ್ಥ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News