×
Ad

ಧರ್ಮಸ್ಥಳ ದೂರು | ಎಸ್‌ಐಟಿ ಮುಂದೆ ಬಂದ ಮೂರನೇ ದೂರುದಾರ!

"ಎಸ್‌ಐಟಿ ರಚನೆಯಾದ ಬಳಿಕ ಭಯಹೋಗಿದೆ; ತನಿಖೆಗೆ ನೆರವು ನೀಡಲು ಸಿದ್ಧ"

Update: 2025-08-06 21:19 IST


ಮಂಗಳೂರು: ಧರ್ಮಸ್ಥಳ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲನೇ ದೂರುದಾರನು ರಹಸ್ಯವಾಗಿ ಹೂತುಹಾಕುತ್ತಿದ್ದ ಸ್ಥಳಗಳನ್ನು ನೋಡಿದ್ದೇನೆ. ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನನ್ನನ್ನೂ ಒಳಪಡಿಸಿ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೂರನೇ ದೂರುದಾರನೋರ್ವರು ಎಸ್‌ಐಟಿ ಗೆ ಪತ್ರ ಬರೆದಿದ್ದಾರೆ.

ಎಸ್ ಐ ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಗೆ ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ, ಎಂದು ಉಲ್ಲೇಖಿಸಿ ಮೂರನೇ ದೂರುದಾರ ಪತ್ರ ಬರೆದಿದ್ದಾರೆ. “ದೃಶ್ಯ ಮಾಧ್ಯಮದಲ್ಲಿ ನೋಡುತ್ತಿರುವ ದೂರುದಾರ ವ್ಯಕ್ತಿಯನ್ನು ಗ್ರಾಮಸ್ಥನಾದ ನಾನು ಗುರುತಿಸಿರುತ್ತೇನೆ. ಆತ ರಹಸ್ಯವಾಗಿ ಜನರಿಗೆ ಕಾಣದಂತೆ ಧರ್ಮಸ್ಥಳ ಗ್ರಾಮದ ವಿವಿಧೆಡೆ ಶವಗಳನ್ನು ಕೊಂಡೊಯ್ದು ಹೂತುಹಾಕಿರುವುದನ್ನು ವಿವಿಧ ಸ್ಥಳಗಳಲ್ಲಿ ನೋಡಿರುತ್ತೇನೆ. ಆತ ರಹಸ್ಯವಾಗಿ ಹೂತುಹಾಕಿರುವುದಾಗಿ ಭಾವಿಸಿದ್ದರೂ, ಗ್ರಾಮಗಳಲ್ಲಿ ಇಂತಹ ವಿಷಯಗಳು ರಹಸ್ಯವಾಗಿ ಉಳಿಯುವುದಿಲ್ಲವೆಂಬುದು ತಮಗೆ ತಿಳಿದಿರುತ್ತದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೂರುದಾರನು ತೋರುತ್ತಿರುವ ಸ್ಥಳಗಳಲ್ಲಿ ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಪ್ರತ್ಯೇಕವಾಗಿ ನನ್ನನ್ನೂ ಒಳಗೊಳಪಡಿಸಿ. ಆತನು ರಹಸ್ಯವಾಗಿ ಹೂತುಹಾಕುತ್ತಿದ್ದ ಸ್ಥಳಗಳನ್ನು ನಾನು ಎಲ್ಲೆಲ್ಲಿ ನೋಡಿದ್ದೇನೆ ಎಂದು ಸ್ವತಂತ್ರವಾಗಿ ತೋರಿಸುವ ಅವಕಾಶವನ್ನೂ ನಮಗೆ ಒದಗಿಸಿ ಎಂದು ಮೂರನೇ ದೂರುದಾರ ಮನವಿ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ನಿಷ್ಪಕ್ಷಪಾತ ತನಿಖೆಗಾಗಿ ಮುಖ್ಯಮಂತ್ರಿಗಳಿಂದ ರಚಿಸಲಾದ ವಿಶೇಷ ತನಿಖಾದಳವು ನಡೆಸುತ್ತಿರುವ ಕಾರ್ಯಾಚರಣೆಯು ನನಗೆ ಭಯದಿಂದ ಹೊರಬರಲು ನೆರವಾಗುತ್ತಿದೆ. ಜನರ ರಕ್ಷಣೆಗೆಂದು ಮುಖ್ಯಮಂತ್ರಿಗಳು ಸ್ಥಾಪಿಸಿರುವ ಈ ವಿಶೇಷ ತನಿಖಾ ದಳಕ್ಕೆ ಸಹಕಾರ ನೀಡಲೇಬೇಕು ಎಂದು ತೀರ್ಮಾನಿಸಿರುತ್ತೇನೆ ಎಂದು ಮೂರನೇ ದೂರುದಾರ ಪತ್ರದಲ್ಲಿ ತಿಳಿಸಿದ್ದಾರೆ.

►ಎಸ್ ಐ ಟಿ ಪ್ರತಿಕ್ರಿಯೆ

ಮೂರನೇ ದೂರುದಾರ ನೀಡಿರುವ ಪತ್ರವನ್ನು ಸ್ವೀಕರಿಸಿರುವ ಎಸ್ ಐ ಟಿ ಯ ಸಹಾಯಕ ತನಿಖಾಧಿಕಾರಿ, ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸಿದ್ದೇವೆ. ಯಾವುದೇ ಅಪರಾಧ ಕೃತ್ಯದ ಕುರಿತು ಮಾಹಿತಿಯನ್ನು / ದೂರನ್ನು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಿ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News