ಧರ್ಮಸ್ಥಳ ದೂರು ಪ್ರಕರಣ | ಸಾಕ್ಷಿಯು ಗುರುತಿಸಿದ ಮೊದಲ ಸ್ಥಳದಲ್ಲಿ ಮಣ್ಣಿನ ಅಭಿವೃದ್ಧಿ ಕೆಲಸ ನಡೆದಿದೆ: ಸುಜಾತಾ ಭಟ್ ಪರ ವಕೀಲರ ಹೇಳಿಕೆ
ಮಂಗಳೂರು, ಜು.30: ಧರ್ಮಸ್ಥಳ ದೂರು ಪ್ರಕರಣದ ಸಾಕ್ಷಿ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಐದು ವರ್ಷಗಳ ಹಿಂದೆ ಮಣ್ಣಿನ ಅಭಿವೃದ್ದಿ ಕೆಲಸ ನಡೆದಿದೆ ಎಂದು ತಿಳಿದುಬಂದಿದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಜುಲೈ 28ರಂದು ಒಟ್ಟು 14 ಶಂಕಿತ ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಥಳ ಸಂಖ್ಯೆ 1 ನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಪ್ರಾಥಮಿಕ ಹಂತದ ಕಾರ್ಯಾಚರಣೆ ಯಲ್ಲಿ ಯಾವುದೇ ಶವ ಪತ್ತೆಯಾಗದಿದ್ದರೂ, ತನಿಖಾ ತಂಡದ ಕ್ರಮಗಳು ವಿಶ್ವಾಸಾರ್ಹವಾಗಿವೆ. ಕಾರ್ಯಾಚರಣೆಯ ವೇಳೆ ಎಸ್‌ಐಟಿ ತೋರಿದ ಸೂಕ್ಷ್ಮತೆ ಮತ್ತು ಗಂಭೀರತೆ ಗಮನಾರ್ಹವಾದುದು. ತಾಂತ್ರಿಕ ನಿಖರತೆ, ವೃತ್ತಿಪರತೆ ಮತ್ತು ಸಮರ್ಪಣೆಯೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಿದ ಎಸ್‌ಐಟಿಗೆ ಸುಜಾತಾ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಎಸ್‌ಐಟಿ ನಡೆಸುತ್ತಿರುವ ತನಿಖೆಯ ವೈಖರಿಯು, ಈ ತನಿಖೆ ನಿಜಕ್ಕೂ ಸಮರ್ಥರ ಕೈಗಳಲ್ಲಿದೆ ಎಂಬ ವಿಶ್ವಾಸವನ್ನು ಉಂಟುಮಾಡಿದೆ. ಮುಂದಿನ ಸ್ಥಳಗಳ ತನಿಖೆಯ ವೇಳೆಯಲ್ಲಿಯೂ ಇದೇ ರೀತಿಯ ವೃತ್ತಿಪರತೆಯಿರಲಿದೆ ಎಂಬ ವಿಶ್ವಾಸವಿದೆ ಎಂದು ಸುಜಾತ ಭಟ್ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೈಟ್ ಸಂಖ್ಯೆ 1 ರಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ಸಿಗದಿದ್ದರೂ, ಸುಜಾತಾ ಭಟ್ ಅವರು ನಿರಾಶೆಗೊಂಡಿಲ್ಲ. ಸಹಾಯಕ ಆಯುಕ್ತರನ್ನು ಒಳಗೊಂಡ ವಿಸ್ತೃತ ಹಾಗೂ ಪರಿಣಿತ ತಂಡದೊಂದಿಗೆ ಎಸ್‌ಐಟಿ ಈ ತನಿಖೆಯನ್ನು ಅತ್ಯಂತ ಗಂಭೀರತೆಯಿಂದ ನಡೆಸುತ್ತಿರುವ ರೀತಿಯು, ಸತ್ಯ ಅನಾವರಣದ ನಿಜವಾದ ಬದ್ಧತೆ ಮತ್ತು ನಿಖರತೆಗೆ ಸ್ಪಷ್ಟ ಪುರಾವೆಯಾಗಿದೆ ಎಂದು ವಕೀಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.