×
Ad

ಧರ್ಮಸ್ಥಳ ದೂರು| ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ್ ರಾವ್‌ರನ್ನು ತಕ್ಷಣ ಬಂಧಿಸಿ: ಎಸ್‌ಐಟಿ ಅಧಿಕಾರಿಗಳಿಗೆ ಸುಜಾತ ಭಟ್ ಪರ ವಕೀಲರ ಆಗ್ರಹ

Update: 2025-07-31 18:58 IST

ಮಂಗಳೂರು : ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾದವರ ಮೃತದೇಹವನ್ನು ಹೂತು ಹಾಕಿರುವ ಆರೋಪದ ಬಗ್ಗೆ ದೂರುದಾರನು ಹೇಳಿದ ಸ್ಥಳದಲ್ಲಿ ಗುರುವಾರ ಕಳೇಬರಗಳು ಪತ್ತೆಯಾಗಿದೆ. ಆದ್ದರಿಂದ ಈ ತನಿಖೆಯ ದಿಕ್ಕು ತಪ್ಪಿಸಲು ಸಾರ್ವಜನಿಕವಾಗಿ ಸುಳ್ಳು ಮಾಹಿತಿಯನ್ನು ಹರಡಿದ್ದ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್‌ ರನ್ನು ಎಸ್ ಐ ಟಿ ಅಧಿಕಾರಿಗಳು ತಕ್ಷಣ ಬಂಧಿಸಬೇಕು ಎಂದು, ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಎನ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ವಕೀಲ ಮಂಜುನಾಥ್, ಜುಲೈ 3ರಂದು ದೂರುದಾರ ಸಾಕ್ಷಿಯು, ಧರ್ಮಸ್ಥಳದಲ್ಲಿ 1995 ರಿಂದ 2014ರ ಅವಧಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿರುವುದಾಗಿ ಹೇಳಿದ್ದರು. ಆ ಸಂದರ್ಭ ಕೆಲವರು ನನಗೆ ಜೀವ ಬೆದರಿಕೆಯೊಡ್ಡಿ, ಕೊಲೆಯಾದ ಪುರುಷ ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿಯರು ಮತ್ತು ಮಹಿಳೆಯರ ಮೃತದೇಹವನ್ನು ಹೂತು ಹಾಕಿಸಿದ್ದಾರೆ ಎಂದು ದೂರು ನೀಡಿದ್ದಾನೆ. ಮೃತದೇಹಗಳನ್ನು ಹೂತುಹಾಕಿರುವ ಬಗ್ಗೆ ಆತ ದೂರು ನೀಡಿದ ಬೆನ್ನಲ್ಲೇ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಎನ್ನುವ ವ್ಯಕ್ತಿಯು ಇತರೆ ಸಮಿತಿ ಸದಸ್ಯರ ಜೊತೆ ಸೇರಿ ಧರ್ಮಸ್ಥಳದಲ್ಲಿ ಯಾವುದೇ ಮೃತ ದೇಹಗಳನ್ನು ರಹಸ್ಯವಾಗಿ ಹೂತು ಹಾಕಲಾಗಿಲ್ಲ. ಪಂಚಾಯತ್ ವತಿಯಿಂದಲೇ ಸತ್ತ ವ್ಯಕ್ತಿಗಳನ್ನು ಹೂತು ಹಾಕಿದೆ ಎಂದು ಪತ್ರಿಕಾ ಪ್ರಕಟನೆಯನ್ನು ನೀಡುತ್ತಾ, ದೂರುದಾರನನ್ನು ಹುಚ್ಚನೆಂದು ಕರೆದಿದ್ದಾರೆ ಎಂದು ಸುಜಾತ ಭಟ್ ಪರ ವಕೀಲ ಮಂಜುನಾಥ್ ಆರೋಪಿಸಿದ್ದಾರೆ.

ಜುಲೈ 28ರಂದು ದೂರುದಾರನು ನೇತ್ರಾವತಿ ಸ್ನಾನಘಟ್ಟದಿಂದ ಸ್ವಲ್ಪ ದೂರಿನಲ್ಲಿರುವ ದುರ್ಗಮ ಕಾಡಿನಲ್ಲಿ ಕೆಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಎಸ್ಐಟಿ ಅವರಿಗೆ ತಿಳಿಸಿದ್ದಾರೆ. ಆ ಎಲ್ಲಾ ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಗೊತ್ತುಪಡಿಸಿ ಅಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ. ದೂರುದಾರನು ಎಸ್ಐಟಿ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ತೋರಿಸಿರುವ ಸ್ಥಳಗಳನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಸಾರ್ವಜನಿಕರು ದಿಗ್ಭ್ರಮೆಯನ್ನು ವ್ಯಕ್ತಪಡಿಸಿರುತ್ತಾರೆ. ಅಪಾಯಕಾರಿ ಸ್ಥಳಗಳು ಮತ್ತು ಸಾಗುವುದಕ್ಕೆ ಅತ್ಯಂತ ದುರ್ಗಮವಾದ ಸ್ಥಳಗಳನ್ನೇ ಹುಡುಕಿಕೊಂಡು ಹೋಗಿ ಮೃತದೇಹವನ್ನು ಹೂತು ಹಾಕುವ ಪರಿಪಾಠವನ್ನು ದೇಶದಲ್ಲಿನ ಯಾವುದೇ ಸರಕಾರ ಅಥವಾ ಪಂಚಾಯತ್‌ ಗಳು ಮಾಡುವುದಿಲ್ಲ. ಮೃತನ ಸಂಬಂಧಿಕರು ಹೂತು ಹಾಕಿರುವ ಸ್ಥಳವನ್ನು ಭೇಟಿ ನೀಡಬೇಕೆಂದು ಕೋರಿದರೆ, ಅವರನ್ನು ಕರೆದುಕೊಂಡು ಹೋಗಬಹುದಾದ ಸುಲಭ ಮಾರ್ಗದ, ಸಾಹಸ ಪಡದೆ ತಲುಪಬಹುದಾದ ಸಾರ್ವಜನಿಕ ಸ್ಥಳಗಳನ್ನಷ್ಟೇ ಸರಕಾರ ಇಲ್ಲವೇ ಪಂಚಾಯತ್‌ ನವರು ಹೆಣಗಳನ್ನು ಹೂಳುವ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮೃತನ ಸಂಬಂಧಿ ಕರನ್ನು ಇಂತಹ ಸಾಹಸಕರ ಮತ್ತು ದುರ್ಗಮ ಸ್ಥಳಗಳಿಗೆ ಕರೆತರಲೆಂದು ಎಂತಹವರೂ ನಿರೀಕ್ಷಿಸುವುದಿಲ್ಲ. ಈ ದಿನ ತೋರಿಸಲಾದ ಸ್ಥಳಗಳು, ಅಪಾಯಕಾರಿಯಾಗಿದೆ. ಯಾರಿಗೂ ಕಾಣಿಸದಂತೆ ದೇಹ ಗಳನ್ನು ರಹಸ್ಯವಾಗಿ ಹೂತು ಹಾಕುವ ಕೆಲಸಗಳಿಗೆ ಹೇಳಿ ಮಾಡಿಸಿದಂತಹ ಸ್ಥಳಗಳಂತೆ ಕಂಡು ಬರುತ್ತಿದೆ ಎಂದು ಮಂಜುನಾಥ್ ಹೇಳಿದ್ದಾರೆ.

ದೂರುದಾರ ದೂರು ನೀಡಿದ ಕೂಡಲೇ ತನಿಖೆಯ ದಿಕ್ಕು ತಪ್ಪಿಸಲು ಕ್ರಿಮಿನಲ್ ಹುನ್ನಾರದಿಂದಲೇ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮತ್ತು ಉಳಿದ ಸಮಿತಿ ಸದಸ್ಯರು ಸಾರ್ವಜನಿಕವಾಗಿ ಬೇಕೆಂದೇ ಸುಳ್ಳು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ. ದೂರುದಾರನು ತೋರಿಸಿ ರುವ ದುರ್ಗಮ ಸ್ಥಳಗಳಲ್ಲಿ ಹೂತು ಹಾಕಿರುವ ಕಳೇಬರಗಳು ಸಿಕ್ಕಿದ ತಕ್ಷಣವೇ ಈ ತನಿಖೆಗೆ ಅಡ್ಡಿಪಡಿಸಲು ಕ್ರಿಮಿನಲ್ ಹುನ್ನಾರ ಮಾಡಿದ್ದ ಕಾರಣಕ್ಕಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ರನ್ನು ಕೂಡಲೇ ಬಂಧಿಸಬೇಕು. ಶ್ರೀನಿವಾಸ ರಾವ್ ತನಿಖೆಯ ದಿಕ್ಕು ತಪ್ಪಿಸಿ ನಿಜವಾದ ಆರೋಪಿಗಳನ್ನು ರಕ್ಷಿಸಲೆಂದು ಸಾರ್ವಜನಿಕವಾಗಿ ಈಗಾಗಲೇ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಈ ವ್ಯಕ್ತಿಯು ಸಾಕ್ಷ್ಯ ನಾಶಪಡಿಸುವ ಅಥವಾ ತಿದ್ದುವ ಕ್ರಿಮಿನಲ್ ಸಂಚು ರೂಪಿಸುವ ಸಾಧ್ಯತೆಯಿರುವುದರಿಂದ ಶ್ರೀನಿವಾಸ ರಾವ್ ನನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡುತ್ತೇವೆ ಎಂದು ವಕೀಲ ಮಂಜುನಾಥ್ ಎನ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News