×
Ad

ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿಯ ಮೇಲಿನ ಅಪಪ್ರಚಾರ ತಡೆಗೆ ಶಾಶ್ವತ ಕ್ರಮಕ್ಕೆ ಆಗ್ರಹ; ಸಿಎಂ ಗೆ ಮನವಿ ನೀಡಲು ಧರ್ಮ ಜಾಗೃತಿ ಸಭೆ ನಿರ್ಣಯ

Update: 2025-08-22 14:24 IST

ಮಂಗಳೂರು,ಆ.22: ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಮೇಲೆ ಅಪಪ್ರಚಾರ ತಡೆಗಟ್ಟಲು ಶಾಶ್ವತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ದ.ಕ ಜಿಲ್ಲಾಧಿಕಾರಿಯ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಧರ್ಮ ಸ್ಥಳ ಭಕ್ತಾಭಿಮಾನಿ ವೇದಿಕೆಯ ವತಿಯಿಂದ ಹಮ್ಮಿಕೊಂಡ ಧರ್ಮ ಜಾಗೃತಿ ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆ ಮಿಯ ಮಾಜಿ ಅಧ್ಯಕ್ಷ ಹಾಗೂ ಧಾರ್ಮಿಕ ಮುಖಂಡ ಎ.ಸಿ. ಭಂಡಾರಿ ವಹಿಸಿದ್ದರು.

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ ಸ್ಥಳದ ಮೇಲಿನ ಅಪಪ್ರಚಾರದ ದಾಳಿ ಕೊನೆಗೊಳಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ವಿಎಚ್ ಪಿ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡುತ್ತಾ, ಹಿಂದೂ ಧರ್ಮ ಕ್ಷೇತ್ರಗಳಿಗೆ ಸ್ವಾಯತ್ತತೆಯನ್ನು ನೀಡಬೇಕು. ಆದರೆ ಅದನ್ನು ತಡೆಯಲು ಕೆಲವು ಹುನ್ನಾರಗಳು ನಡೆಯುತ್ತಿದ್ದು,  ಧರ್ಮಸ್ಥಳದಲ್ಲಿ ಈ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡುತ್ತಾ, ಅನನ್ಯ ಭಟ್ ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿ, ಅದರಲ್ಲಿ ಸತ್ಯಾಂಶವಿಲ್ಲ ಎಂದರು.

ಕಿಯೋನಿಕ್ಸ್ ಮಾಜಿ ಅದ್ಯಕ್ಷ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡುತ್ತಾ,ತಲೆ ಬುರುಡೆ ತಂದ ಅನಾಮಿಕ ವ್ಯಕ್ತಿಯ ತನಿಖೆ ಆಗಬೇಕಿತ್ತು. ಆ ತಲೆ ಬುರುಡೆ ಎಲ್ಲಿಂದ ಬಂತು ಎನ್ನುವ ಬಗ್ಗೆ ತನಿಖೆ ನಡೆಯಬೇಕಿತ್ತು. ಆ ತನಿಖೆ ಪೂರ್ಣ ಗೊಳಿಸಲು ಎಸ್ ಐಟಿ ಪೊಲೀಸರಿಗೆ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.

ಸಮಾರಂಭದ ವೇದಿಕೆಯಲ್ಲಿಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ , ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಾಥ್ ಹೆಬ್ಬಾರ್ , ಶ್ವೇತಾಂಬರ ಜೈನ ಸಮುದಾಯದ ಪ್ರತಿನಿಧಿ ದಿಲೀಪ್, ಶರವು ರಾಘವೇಂದ್ರ ಶಾಸ್ತ್ರಿ, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಕುಮಾರ್, ಚಂದ್ರಶೇಖರ ಉಚ್ಚಿಲ, ಲಕ್ಷ್ಮಣ ಕೋಡಿಕಲ್, ಕೆ.ಸಿ.ನಾಯಕ್, ಸತೀಶ್ ಕುಂಪಲ, ಸಂತೋಷ್ ಕುಮಾರ್ ಬೊಳಿಯಾರ್, ಪುಷ್ಪರಾಜ್ ಜೈನ್, ಎಚ್.ಕೆ.ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು.

ಕಸಾಪ ದ.ಕ ಜಿಲ್ಲೆಯ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭುವನಾಭಿರಾಮ ಉಡುಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News