×
Ad

ದ.ಕ. : ನ.24ರಿಂದ ಡಿ.9ರವರೆಗೆ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ

ದ.ಕ. ಜಿಲ್ಲೆಯಲ್ಲಿ 2025-26ರಲ್ಲಿ 40 ಪ್ರಕರಣಗಳು ಪತ್ತೆ

Update: 2025-11-21 16:51 IST

ಮಂಗಳೂರು, ನ. 21: ದ.ಕ. ಜಿಲ್ಲೆಯಾದ್ಯಂತ ನ. 24ರಿಂದ ಡಿಸೆಂಬರ್ 9ರವರೆಗೆ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 2025-26ನೆ ಸಾಲಿನಲ್ಲಿ (ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ) ಕುಷ್ಟರೋಗಕ್ಕೆ ಸಂಬಂಧಿಸಿ 40 ಪ್ರಕರಣಗಳು ಪತ್ತೆಯಾಗಿವೆ ಎಂದರು.

ಕಳೆದ ಐದು ವರ್ಷಗಳಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಕುಷ್ಟರೋಗ ಪತ್ತೆ ಹಚ್ಚುವ ಕಾರ್ಯ ಆರೋಗ್ಯ ಇಲಾಖೆಯಿಂದ ನಡೆಸಲಾಗಿದೆ. ಈ ವರ್ಷ ಕಳೆದ ಐದು ವರ್ಷಗಳಲ್ಲಿ ಪತ್ತೆಯಾಗಿರು ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯಲ್ಲಿ ಮಹಿಳಾ ಮತ್ತು ಪುರುಷ ಸ್ವಯಂ ಸೇವಕರು, ಮೇಲ್ವಿಚಾರಕರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಮನೆ ಮನೆ ಸಮೀಕ್ಷೆ ನಡೆಸಿ ಕುಷ್ಟರೋಗ ಪ್ರಕರಣ ಕಂಡು ಹಿಡಿದು ಸೂಕ್ತ ಬಹುವಿಧ ಐಷಧಿ (ಎಂಡಿಟಿ) ಚಿಕಿತ್ಸೆ ಒದಗಿಸಲಾಗುವುದು. 2027-2030ಕ್ಕೆ ಶೂನ್ಯ ಪ್ರಸರಣ ತಲುಪಲು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ದೇಹದ ಮೇಲೆ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳಿದ್ದು, ಸ್ಪರ್ಶಜ್ಞಾನ, ನೋವು, ನವೆ ಇಲ್ಲದೆ ಇದ್ದಲ್ಲಿ, ಕೈಕಾಲುಗಲ್ಲಿ ಜೋಮು ಉಂಟಾಗುವುದು ಮತ್ತು ಮರಗಟ್ಟುವುದು, ಮುಖ ಅಥವಾ ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಕುಷ್ಟರೋಗದ ಲಕ್ಷಣವಾಗಿರುತ್ತದೆ. 1ರಿಂದ 5 ಮಚ್ಚೆಗಳು ಹಾಗೂ ಒಂದು ನರಕ್ಕೆ ಸೋಂಕು ತಗಲಿದ್ದರೆ ಅದು ಪಾಸಿಬ್ಯಾಸಿಲ್ಲರಿ (ಪಿಬಿ) ಕುಷ್ಟರೋಗವೆಂದೂ, 6ಕ್ಕಿಂತ ಹೆಚ್ಚಿನ ಕಲೆ ಹಾಗೂ ಒಂದಕ್ಕಿಂತ ಹೆಚ್ಚಿನ ನರಗಳಿಗೆ ಸೋಂಕು ತಗಲಿದರೆ ಅದು ಮಲ್ಟಿಬ್ಯಾಸಿಲ್ಲರಿ (ಎಂಬಿ) ಕುಷ್ಟರೋಗವೆಂದು ಪರಿಗಣಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪತ್ತೆಯಾಗಿರುವ 40ರಲ್ಲಿ 36 ಪ್ರಕರಣಗಳು ಎಂಬಿ ಪ್ರಕರಣಗಳಾಗಿವೆ. ಇದರಲ್ಲಿ 27ರಷ್ಟು ಪ್ರಕರಣಗಳು ದ.ಕ. ಜಿಲ್ಲೆಯ ನಿವಾಸಿಗಳಾಗಿದ್ದರು, ಉಳಿದವರು ಜಾರ್ಖಂಡ್‌, ಬಿಹಾರ ಮೊದಲಾದ ಕಡೆಗಳ ವಲಸೆ ಕಾರ್ಮಿಕರಾಗಿದ್ದಾರೆ. ಕುಷ್ಟರೋಗ ನಿಯಮಿತ ಚಿಕಿತ್ಸೆಯ ಮೂಲಕ ಸಂಪೂರ್ಣ ಗುಣಮುಖವಾಗುವ ಕಾಯಿಲೆಯಾಗಿದ್ದರೂ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾರಣ ಈ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ಸುದರ್ಶನ್ ಮಾಹಿತಿ ನೀಡಿದರು.

ಗೋಷ್ಟಿಯಲ್ಲಿ ವೆನ್‌ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ನವೀನ್ ಉಪಸ್ಥಿತರಿದ್ದರು.

ಕಳೆದ ಆರು ವರ್ಷಗಳಲ್ಲಿ ಪತ್ತೆಯಾದ ಪ್ರಕರಣಗಳು :

ವರ್ಷ            ಎಂಬಿ     ಪಿಬಿ        ಒಟ್ಟು

2020-21        23           6               29

2021-22        34           5               39

2022-23        68           7               75

2023-24        56           6               62

2024-25        41           2               43

2025-26        36           4               40

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News