ಅಂಧಶ್ರದ್ಧೆ, ಮೂಢನಂಬಿಕೆಗಳಿಂದ ಆರೋಗ್ಯ-ಸಂಪತ್ತು ನಷ್ಟ, ಲೈಂಗಿಕ ಶೋಷಣೆ ಸಾಧ್ಯತೆ ಅಧಿಕ: ಡಾ.ಮಾಧವ ರಾವ್
ಕಾರ್ಯಕ್ರಮವನ್ನುದ್ದೇಶಿಸಿ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಮಾತನಾಡಿದರು
ಮಂಗಳೂರು, ಆ.20: ಅಂಧಶ್ರದ್ಧೆ, ಮೂಢನಂಬಿಕೆಗಳಿಂದ ಆರೋಗ್ಯ, ಸಂಪತ್ತು ನಷ್ಟದ ಜೊತೆ ಲೈಂಗಿಕ ಶೋಷಣೆಗೊಳಗಾಗುವ ಸಾಧ್ಯತೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ಮಾಧವ ರಾವ್ ತಿಳಿಸಿದ್ದಾರೆ.
ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನದ ಅಂಗವಾಗಿ ರಾಷ್ಟ್ರೀಯ ವಿಚಾರವಾದಿಗಳ ಒಕ್ಕೂಟದ ವತಿಯಿಂದ ಡಾ.ನರೇಂದ್ರ ದಾಬೋಲ್ಕರ್ ಸ್ಮರಣಾರ್ಥ ನಗರದ ಎಐಬಿಇಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮೂಢನಂಬಿಕೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿ ವಿಭಿನ್ನವಾಗಿರುತ್ತದೆ. ಭಾರತದ ಕೆಲವು ಕಡೆ ಬೆಕ್ಕು ಕಂಡರೆ ಅನಿಷ್ಟ ಎನ್ನುತ್ತಾರೆ. ಈಜಿಪ್ಟ್ ನಲ್ಲಿ ಬೆಕ್ಕು ಪ್ರೀತಿಯ ಸಂಕೇತವಾಗಿ ಅದನ್ನು ಕಾಣಲು ಕಾತರಿಸುತ್ತಾರೆ. ಆದರೆ ವೈಜ್ಞಾನಿಕ ಸಂಗತಿಗಳು ಸಾಕಷ್ಟು ಸುದೀರ್ಘ ವಾದ ಸಂಶೋಧನೆಯ ಪರಿಣಾಮ ಫಲಿತಾಂಶಗಳ ಆಧಾರದಲ್ಲಿ ರೂಪುಗೊಂಡಿದೆ. ಈ ಮನೋಭಾವ ನಮ್ಮಲ್ಲಿ ಇಲ್ಲದೆ ಇದ್ದಾಗ ನಮ್ಮ ಕಷ್ಟಗಳಿಗೆ ವೈಜ್ಞಾನಿಕ ಸಕಾರಣವನ್ನು ತಿಳಿಯದೆ ಹೋದಾಗ ಅಂಧಶ್ರದ್ಧೆಗೆ ಒಳಗಾಗಿ ಆಸ್ತಿ, ಸಂಪತ್ತು, ಆರೋಗ್ಯ ಕಳೆದುಕೊಂಡು ಶೋಷಣೆ ಗೊಳಗಾದ ಉದಾಹರಣೆಗಳಿವೆ. ವೈಜ್ಞಾನಿಕ ಮನೋಭಾವ ಎಲ್ಲಾ ಕ್ಷೇತ್ರಗಳಲ್ಲೂ ವಿಸ್ತರಣೆ ಯಾಗಬೇಕಾಗಿದೆ ಎಂದು ಡಾ.ಮಾಧವ ರಾವ್ ಹೇಳಿದರು.
ಮೌಢ್ಯಗಳ ಸ್ವರೂಪ ಬದಲಾಗುತ್ತಿದೆ:
ವರ್ಷಗಳು ಕಳೆದಂತೆ ಮೌಢ್ಯಗಳ ಸ್ವರೂಪ ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ತರ್ಕಬದ್ಧವಾಗಿ ಚಿಂತನೆ ಮಾಡುವ ಜನರ ಅಗತ್ಯವಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅಭಿಪ್ರಾಯಿಸಿದ್ದಾರೆ.
ಹಿಂದೆ ಶೂನ್ಯ ದಿಂದ ಬೂದಿ, ವಾಚ್, ಚೈನು ಸೃಷ್ಟಿ ಮಾಡುವ ಬಾಬಾಗಳಿದ್ದರು. ಈಗ ಆರೋಗ್ಯ, ಔಷಧೀಯ ಹೆಸರಿನಲ್ಲಿ ಜನರನ್ನು ಮೋಸ ಮಾಡುವವರಿದ್ದಾರೆ. ಅವರು ಗೋಮೂತ್ರವನ್ನು ಬೆರೆಸಿ ಅದರಿಂದ ಕಲುಷಿತ ನೀರನ್ನು ಶುದ್ಧೀಕರಣ ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸುತ್ತಾರೆ. ಆದರೆ ವಾಸ್ತವವಾಗಿ ಜನರನ್ನು ನಂಬಿಸಲು ಅವರು ರಾಸಾಯನಿಕಗಳನ್ನು ಬೆರೆಸಿ ಗೋಮೂತ್ರ ಶ್ರೇಷ್ಠ ಎನ್ನುತ್ತಾರೆ. ಐಐಟಿಯಂತಹ ಸಂಸ್ಥೆಯಲ್ಲೂ ಈ ರೀತಿಯ ಬಾಬಾಗಳು ತೆರಳಿ ಅವೈಜ್ಞಾನಿಕ ವಿಚಾರಗಳನ್ನು ಬಿತ್ತುವುದು ಅಪಾಯಕಾರಿ ಬೆಳವಣಿಗೆ ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಆಧುನಿಕ ವೈದ್ಯಕೀಯ ವಿಜ್ಞಾನ ವನ್ನು ಕೀಳಾಗಿ ಕಾಣುವ ಧೋರಣೆ ಸಲ್ಲದು:
ಮಂಗಳೂರಿನ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಕೀಳಾಗಿ ಕಾಣುವ ಧೋರಣೆ ಸಲ್ಲದು. ಸಾಕಷ್ಟು ಸುದೀರ್ಘವಾದ ಸಂಶೋಧನೆ ಫಲವಾಗಿ ಸಾಕಷ್ಟು ಸಾಕ್ಷ್ಯ ಆಧಾರಗಳೊಂದಿಗೆ ಆಧುನಿಕ ವೈದ್ಯ ವಿಜ್ಞಾನ ನಮ್ಮ ಮುಂದಿದೆ. ಹಲವಾರು ಮಾರಕ ಕಾಯಿಲೆಗಳನ್ನು ತೊಡೆದು ಹಾಕಲು ಸಾಧ್ಯವಾಗಿದೆ. ಈ ಪದ್ಧತಿಯಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಬದಲಾಗಿ ಅದನ್ನು ಕೀಳಾಂದಾಜು ಮಾಡಿ ಆಧುನಿಕ ವೈದ್ಯ ಪದ್ಧತಿಗಿಂತ ಭಿನ್ನವಾದ ಆಯುಷ್, ಯೋಗ ಸೇರಿದಂತೆ ವಿವಿಧ ಪದ್ಧತಿಗಳಿಗೆ ಸಾಕ್ಷ್ಯಾಧಾರಗಳಿಲ್ಲದೆ ಪ್ರೋತ್ಸಾಹ ನೀಡುವುದು ವೈಜ್ಞಾನಿಕವಾಗಿ ಸಮರ್ಪಕವಾದ ಕ್ರಮವಲ್ಲ ಎಂದು ಅಭಿಪ್ರಾಯಿಸಿದರು.
ಜಗತ್ತಿನ ಮುಂದುವರಿದ ದೇಶಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಲ್ಲಿನ ರಾಷ್ಟ್ರೀಯ ಉತ್ಪನ್ನದ ಶೇ.12ರಿಂದ 16 ಪಾಲು ಬಳಸುತ್ತಾರೆ. ಪರಿಣಾಮವಾಗಿ ಅಲ್ಲಿ ಶಿಶು ಮರಣ ಪ್ರಮಾಣ ಕನಿಷ್ಠ ಮಟ್ಟದಲ್ಲಿದೆ. ನಮ್ಮ ದೇಶದಲ್ಲಿ 40 ವರ್ಷಗಳ ಹಿಂದೆ ಇದ್ದ ಕೆಲವು ಕಾಯಿಲೆ ಗಳು ಈಗಲೂ ಮಕ್ಕಳಲ್ಲಿ, ಯುವಕರಲ್ಲಿ ಕಂಡು ಬರುತ್ತಿದೆ. ಉದಾಹರಣೆಗೆ ಸಕ್ಕರೆ ಕಾಯಿಲೆ ಈಗ ಹೆಚ್ಚು ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಬದಲಾಗಿರುವ ಜೀವನ ಶೈಲಿ, ಆಹಾರ ಪದ್ಧತಿ ಸಂಸ್ಕರಿಸಿ ಆಹಾರ, ಹೆಚ್ಚು ಸಿಹಿ ತಿನಿಸುಗಳ ಸೇವನೆ, ನಿಯಂತ್ರಣ ವಿಲ್ಲದ ಆಹಾರ ಸೇವನೆಯಿಂದ ಕಾಯಿಲೆಗಳು ನಮ್ಮನ್ನು ಬಾಧಿಸತೊಡಗಿವೆ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಬಡತನ ಹೆಚ್ಚು, ಕಾಯಿಲೆ ಕಡಿಮೆ ಇತ್ತು. ಈಗ ಶ್ರೀ ಮಂತರಿಗೆ ಬರುವ ಕಾಯಿಲೆ ಬಡವರನ್ನು ಕಾಡತೊಡಗಿವೆ ಎಂದು ಡಾ.ಕಕ್ಕಿಲ್ಲಾಯ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ವಿಚಾರವಾದಿ ವೇದಿಕೆಯ ಮುಖಂಡರಾದ ವಾಸುದೇವ ಉಚ್ಚಿಲ್ ಸ್ವಾಗತಿಸಿದರು. ಡಾ.ಕೃಷ್ಣಪ್ಪ ಕೊಂಚಾಡಿ ವಂದಿಸಿದರು.