×
Ad

ಮಂಗಳೂರು: ಮಾಜಿ ಮೇಯರ್ ಅಶ್ರಫ್ ಪಕ್ಷದ ಹುದ್ದೆಗೆ ರಾಜೀನಾಮೆ

Update: 2025-05-28 18:19 IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಲವು ದಿನದಿಂದ ನಡೆಯುತ್ತಿದ್ದ ಅಹಿತಕರ ಘಟನೆ, ಮತೀಯ ಕೊಲೆಯ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಪ್ರಕ್ರಿಯೆ ಆರಂಭಗೊಂಡಿವೆ.

ಈಗಾಗಲೆ ಕಾಂಗ್ರೆಸ್‌ನಲ್ಲಿರುವ ಅಲ್ಪಸಂಖ್ಯಾತರ ಘಟಕದ ಮುಖಂಡರು ಮೇ 29ರ ಮಧ್ಯಾಹ್ನ ನಗರದಲ್ಲಿ ಸಾಮೂಹಿಕ ರಾಜೀನಾಮೆಗೆ ಸಂಬಂಧಿಸಿ ಸಭೆಯೊಂದನ್ನು ಕರೆದಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಬುಧವಾರವೇ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿ ಸರಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ದ.ಕ.ಜಿಲ್ಲೆಯ ಮತ್ತು ರಾಜ್ಯದ ಇತರೆಡೆಗಳಲ್ಲಿ ಅಲ್ಪಸಂಖ್ಯಾತರರಿಗೆ ಸಂಘ ಪರಿವಾರದಿಂದ ಆಗುತ್ತಿರುವ ದೌರ್ಜನ್ಯ, ಕೋಮು ಪ್ರಚೋದಿತ ಚಟುವಟಿಕೆ, ದ್ವೇಷ ಭಾಷಣ, ಅಮಾಯಕ ವ್ಯಕ್ತಿಗಳ ಕೊಲೆ, ಅಮಾಯಕರ ಬಂಧನ, ಅಧಿಕಾರಿಗಳ ಮತೀಯ ತಾರತಮ್ಯ, ಅಬ್ದುಲ್ ರಹ್ಮಾನ್‌ರ ಬರ್ಬರ ಹತ್ಯೆ ತಡೆಯಲು ಪೊಲೀಸರು ಮತ್ತು ಗುಪ್ತಚರ ಅಧಿಕಾರಿಗಳ ವಿಫಲತೆ, ಜಿಲ್ಲೆಯಲ್ಲಿ ಘೋಷಿತ ಹತ್ಯೆಯ ಬೆದರಿಕೆಗೆ ಕಡಿವಾಣ ಹಾಕಲು ವಿಫಲತೆ, ಕಾನೂನು ಸುವ್ಯವಸ್ಥೆ ಪಾಲನೆ ವಿಫಲತೆ ಇತ್ಯಾದಿಯನ್ನು ನಿಭಾಯಿಸಲು ಹಾಲಿ ಸರಕಾರವು ವಿಫಲವಾದ ಕಾರಣ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಮಾಜಿ ಮೇಯರ್ ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಬ್ದುಲ್ ರಹ್ಮಾನ್ ಹತ್ಯೆಯನ್ನು ವೈಯುಕ್ತಿಕ ವೈಷಮ್ಮಕ್ಕಾಗಿ ಹತ್ಯೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಸಚಿವರಿಗೆ ಅಧಿಕಾರಿಗಳು ತಪ್ಪುಮಾಹಿತಿ ನೀಡಿದ್ದಾರೆ. ಹಾಗಾಗಿ ಈ ಹೇಳಿಕೆಯನ್ನು ಸಚಿವರು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಗುರುಪುರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ (ಬದ್ರಿಯಾ), ಕುಪ್ಪೆಪದವು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಸ್ತಫಾ ಕಾಡಕೇರಿ ರಾಜೀನಾಮೆ ನೀಡಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಸ್ಥಾನಕ್ಕೆ ಅಝೀಝ್ ಕಂದಾವರ, ಕೊಣಾಜೆ ವಲಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ ಅಮೀರ್ ಕೋಡಿಜಾಲ್ ರಾಜೀನಾಮೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News