ಇನೋಳಿ: ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ಪದವಿ ಪ್ರದಾನ ಸಮಾರಂಭ
ಪರಿಸರ ಉಳಿಸಿದರೆ ಮಾತ್ರ ಮಾನವಕುಲ ಉಳಿದೀತು: ಕೀರ್ತಿ ಷಾ
ಮಂಗಳೂರು : ಪ್ರಕೃತಿಯ ನಾಶ ಹೆಚ್ಚಾಗುತ್ತಿವೆ, ನದಿಗಳು ಕಲುಷಿತವಾಗುತ್ತಿವೆ, ಪರ್ವತಗಳು ಹಾಳಾಗುತ್ತಿವೆ. ಪರಿಸರ, ಪೃಕೃತಿ ಉಳಿದರೆ ಮಾತ್ರ ಮಾನವಕುಲ ಉಳಿದೀತು ಎಂದು ಅಹ್ಮದಾಬಾದ್‌ನ ಎಎಸ್ ಎಜಿ ಸ್ಥಾಪಕ ನಿರ್ದೆಶಕರು ಹಾಗೂ ಐನ್ ಎನ್ ಎಫ್ ನ ಅಧ್ಯಕ್ಷರಾದ ಆರ್ಕಿಟೆಕ್ಟ್ ಕೀರ್ತಿ ಷಾ ಅವರು ಹೇಳಿದರು.
ಅವರು ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS), ಬಿಐಟಿ ಪಾಲಿಟೆಕ್ನಿಕ್ ಮತ್ತು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸ್ (BIES)ನ 2025ರ ಪದವಿ ಪ್ರಧಾನ ಸಮಾರಂಭ (Graduation Day 2025) ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ‘ಕೊಳೆಗೇರಿಗಳಿಲ್ಲದ ನಗರಗಳು’ ಎಂಬ ವಿಷಯದ ಕುರಿತು ಮಾತನಾಡಿದ ಕೀರ್ತಿ ಷಾ, ಕೊಳೆಗೇರಿಗಳು ಅಸಮಾನತೆಯ ಚಿಹ್ನೆಗಳು ಎಂದು ಹೇಳಿದರು. ನಗರ ಅಭಿವೃದ್ಧಿಗೆ ಎಲ್ಲರನ್ನೂ ಒಳಗೊಂಡ ವಿಧಾನಕ್ಕೆ ಕರೆ ನೀಡಿದರು. ಬ್ಯಾರೀಸ್ ಗ್ರೂಪ್‌ನ ದೃಷ್ಟಿಕೋನವನ್ನು ಶ್ಲಾಘಿಸುತ್ತಾ, "ಸೈಯದ್ ಮುಹಮ್ಮದ್ ಬ್ಯಾರಿ ಒಬ್ಬ ದೂರದೃಷ್ಟಿಯ ನಾಯಕ. ಪ್ರಕೃತಿಯ ನಾಶ ಹೆಚ್ಚಾಗುತ್ತಿವೆ, ನದಿಗಳು ಕಲುಷಿತವಾಗುತ್ತಿವೆ, ಪರ್ವತಗಳು ಹಾಳಾಗುತ್ತಿವೆ. ನಾವು ಪ್ರಕೃತಿಯ ರಕ್ಷಕರಾಗಬೇಕಾದ ಅನಿವಾರ್ಯತೆ ಇದೆ. ಪರಿಸರ, ಪೃಕೃತಿ ಉಳಿದರೆ ಮಾತ್ರ ಮಾನವಕುಲ ಉಳಿದೀತು. ನಾವು ನಾಶದ ಬದಲು ಸೃಜನಶೀಲರಾಗಿ ಬದಲಾಗಬೇಕು. ಬ್ಯಾರೀಸ್ ಗ್ರೂಪ್ ಇಂತಹ ಸೃಜನಶೀಲರನ್ನು ರೂಪಿಸಬಲ್ಲ ಸ್ಥಳ" ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ಅಸಮಾನತೆಗಳು ಹೆಚ್ಚಾಗಿದೆ. ನಗರೀಕರಣ ವ್ಯವಸ್ಥೆಯಲ್ಲೂ ಇಂತಹ ಅಸಮಾನತೆಗಳು ಕಾಣಸಿಗುತ್ತಿವೆ. ಒಂದು ಕಡೆ ಭವ್ಯ ಬಂಗಲೆಗಳು, ಮತ್ತೊಂದು ಕಡೆ ಸ್ಲಂಗಳಿವೆ. ನಗರಗಳು ಆರ್ಥಿಕ ಅಭಿವೃದ್ಧಿಯ ಇಂಜಿನ್ ಎಂದು ಹೇಳಲಾಗುತ್ತಿದ್ದರೂ ಅವುಗಳಲ್ಲಿ ಪರಿಸರ ಹಾನಿಯ ಸವಾಲುಗಳು ಹೆಚ್ಚುತ್ತಿವೆ ಎಂದರು.
ನಾವು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಿದೆ. ಭವಿಷ್ಯದಲ್ಲಿ ನಗರಗಳ ಕಲ್ಪನೆಗಳಿಗೆ ಉತ್ತಮ ಯೋಜನೆಗಳನ್ನು ರೂಪಿಸದಿದ್ದರೆ ಕ್ರಾಂತಿಕಾರಿ ಪರಿಣಾಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು. ಬ್ಯಾರೀಸ್ ಶಿಕ್ಷಣ ಸಂಸ್ಥೆ ಉತ್ತಮ ಪರಿಸರದಲ್ಲಿ ನಿರ್ಮಾಣಗೊಂಡು ಯುವಕರಲ್ಲಿ ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸುತ್ತಿದೆ. ಉತ್ತಮ ವಾಸ್ತುಶಿಲ್ಪಿಗಳು , ಇಂಜಿನಿಯರ್ಸ್ ಗಳನ್ನು ಮಾತ್ರವಲ್ಲದೆ ಸಮಾಜಕ್ಕೆ ಬೇಕಾದ ನಾಯಕರನ್ನು ರೂಪಿಸುತ್ತಿದೆ ಎಂದರು.
ಎನ್ಐಟಿಕೆ ಸುರತ್ಕಲ್‌ನ ಇಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ನಿಮ್ಮ ಪದವಿ ಕೇವಲ ಸಾಧನೆ ಅಲ್ಲ. ನಿಮ್ಮ ಪದವಿ ನಿಮ್ಮ ಹೊಣೆಗಾರಿಕೆಯ ಸಂಕೇತ ಎಂದು ನೆನಪಿಸಿದರು. ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಿ ಸಮಾಜವನ್ನು ಮೇಲಕ್ಕೆತ್ತಬೇಕು. ಯಶಸ್ಸು ನೈತಿಕತೆ ಮತ್ತು ನಿರಂತರ ಕಲಿಕೆಯಲ್ಲಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ವಿಶ್ಲೇಷಣೆಯ ಯುಗದಲ್ಲಿ ಹೊಸ ಪದವೀಧರರು ನಿರಂತರವಾಗಿ ಕಲಿಯುವುದು ಅತ್ಯಗತ್ಯ ಎಂದು ಹೇಳಿದರು. ಇದೇ ವೇಳೆ ಅವರು ಶಿಕ್ಷಣ ಮತ್ತು ಸಮಾಜ ಸೇವೆಗೆ ಬ್ಯಾರೀಸ್ ಫೌಂಡೇಶನ್‌ನ ದೀರ್ಘಕಾಲದ ಕೊಡುಗೆಯನ್ನು ಶ್ಲಾಘಿಸಿದರು.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಅನೇಕ ಅವಕಾಶಗಳ ಜೊತೆಗೆ ಸವಾಲುಗಳೂ ನಮ್ಮ ಮುಂದಿದೆ. ತಂತ್ರಜ್ಞಾನ, ಜ್ಞಾನ, ಕೌಶಲ್ಯಗಳ ಸಮರ್ಪಕ ಬಳಕೆಯೊಂದಿಗೆ ಯಶಸ್ವಿ ಜೀವನ ನಮ್ಮದಾಗಿಸಬೇಕು ಎಂದರು. ಕೃತಕ ಬುದ್ದಿಮತ್ತೆ ಯಂತಹ ನೂತನ ತಂತ್ರಜ್ಞಾನಗಳು ಭವಿಷ್ಯದಲ್ಲಿ ಪರಿಣಾಮಕಾರಿಯಾಗಲಿದ್ದು, ಸಮರ್ಪಕ ಬಳಕೆಯ ಕೌಶಲ್ಯ, ಕಲೆಗಾರಿಕೆಯ ಅರಿವು ನಮಗಿರಬೇಕಿದೆ. ಪ್ರತಿಯೊಬ್ಬ ನಾಗರಿಕರೂ ಸ್ವಾವಲಂಬಿ ಬದುಕಿನೊಂದಿಗೆ ದೇಶಕ್ಕಾಗಿ ಕೊಡುಗೆ ನೀಡುವುದರೊಂದಿಗೆ ಮುನ್ನಡೆಯಿರಿ ಎಂದರು.
99ಗೇಮ್ಸ್ ಹಾಗೂ ರೋಬೋಸಾಫ್ಟ್‌ನ ಸ್ಥಾಪಕರಾದ ರೋಹಿತ್ ಭಟ್ ಮಾತನಾಡಿ, ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಸಹನೆ ಮತ್ತು ಪ್ರೋತ್ಸಾಹದ ಮಾತುಗಳನ್ನಾಡಿದರು. ಯಶಸ್ಸು ತಕ್ಷಣ ಬರುವುದಿಲ್ಲ. ಸಹನೆಯಿಂದಿರಿ. ಇದು ನಿಮ್ಮ ಜೀವನದ ಆರಂಭ ಮಾತ್ರ. ಆರು ತಿಂಗಳು ಅಥವಾ ಒಂದು ವರ್ಷ ವೃತ್ತಿಜೀವನದಲ್ಲಿ ಏನೂ ಆಗದಿದ್ದರೂ ಚಿಂತಿಸಬೇಡಿ. ಸಹನೆ ಹೊಂದಿದವರಿಗೇ ಯಶಸ್ಸು ಬರುತ್ತದೆ. ಜೀವನವು ಚಲನಶೀಲವಾದುದು. ಬದಲಾವಣೆಯ ಕಾಲಚಕ್ರದಲ್ಲಿ ಆಧುನಿಕತೆಗೆ ಪೂರಕವಾಗಿ ಬೆಳೆಯಬೇಕು ಜೊತೆಗೆ ನಾವು ಉದ್ಯೋಗದ ಸೃಷ್ಟಿಕಾರರಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಮೌಲ್ಯಗಳು, ಕೃತಜ್ಞತೆ ಮತ್ತು ನಂಬಿಕೆಯ ಕುರಿತು ಜೀವನ ಪಾಠಗಳನ್ನು ಹಂಚಿಕೊಂಡರು. ನಾವು ಬೋರ್ಡ್ ಪರೀಕ್ಷೆಗಳಿಗೆ ಸಿದ್ಧರಾಗುತ್ತೇವೆ, ಆದರೆ ಜೀವನದ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ಜೀವನದ ಪರೀಕ್ಷೆಯಲ್ಲಿ ಪ್ರತಿಯೊಂದು ಹಂತದಲ್ಲೂ ಹೊಸ ಪ್ರಶ್ನೆಗಳು ಇರುತ್ತವೆ ಎಂದು ಹೇಳಿದರು.
ಅವರು ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪಾಲಿಸಲು ಸಲಹೆ ನೀಡಿದರು. ಯಾವುದೇ ಶಾರ್ಟ್ ಕಟ್ ದಾರಿಯಲ್ಲಿ ಮುನ್ನಡೆಯದೆ ಸತತ ಪ್ರಯತ್ನ, ಪರಿಶ್ರಮದ ಹಾದಿಯ ಮೂಲಕ ಯಶಸ್ಸು ಜೀವನ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಬ್ಯಾರಿ, ಆಸಿಫ್ ಬ್ಯಾರಿ, ವಿವಿಧ ವಿಭಾಗಗಳ ಪ್ರಾಂಶುಪಾಲರಾದ ಪ್ರೊ.ಪ್ರಥ್ವಿರಾಜ್, ಡಾ.ಅಬ್ದುಲ್ ರಝಾಕ್, ಡಾ. ಅಬ್ದುಲ್ ಲತೀಫ್, ಡಾ. ಅಬ್ದುಲ್ಲಾ ಗುಬ್ಬಿ ಹಾಗೂ ಇತರ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಐಟಿ ಪ್ರಾಂಶುಪಾಲರಾದ ಡಾ.ಮಂಝೂರು ಬಾಷಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಡಾ.ಅಝೀಜ್ ಮುಸ್ತಫಾ ಪದವಿ ಪ್ರಮಾಣ ಬೋಧಿಸಿದರು. ಡಾ.ಪೂಜಾ, ಪ್ರೊ.ನೂತನ ಪ್ರಸಾದ್, ಪ್ರೊ.ಜಾಯ್ಸನ್ ಮಿರಾಂಡ, ಪ್ರೊ.ದಿಲ್ನವಾಝ್ ಬಾನು ಅತಿಥಿಗಳನ್ನು ಪರಿಚಯಿಸಿದರು. ಬಿಐಇಎಸ್ ನ ಪ್ರಾಂಶುಪಾಲರಾದ ಡಾ.ಅಝೀಜ್ ಮುಸ್ತಫಾ ವಂದಿಸಿದರು.