×
Ad

ಧರ್ಮಸ್ಥಳ ಪ್ರಕರಣ | ಕುಸುಮಾವತಿ ಸಲ್ಲಿಸಿದ ಪಿಐಎಲ್ ವಿಚಾರಣೆ: ಸರಕಾರದ ಅಭಿಪ್ರಾಯ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2026-01-13 11:59 IST

Photo credit: PTI

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳನ್ನು ಪ್ರತ್ಯೇಕ ಎಫ್ಐಆರ್ ಮಾಡಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (SIT) ಸೂಚಿಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠದ ಮುಂದೆ ವಿಚಾರಣೆಗೆ ಬಂತು.

ಹಿರಿಯ ವಕೀಲ ಎಸ್ ಬಾಲನ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಧರ್ಮಸ್ಥಳ ಎಂಬ ಗ್ರಾಮದ ಸಣ್ಣ ಹೊರಠಾಣೆ ಪೋಲೀಸ್ ಠಾಣಾ ವ್ಯಾಪ್ತಿಯೊಂದರಲ್ಲೇ 74 ಅಸಹಜ ಸಾವು ಪ್ರಕರಣಗಳು ವರದಿಯಾಗಿದೆ. ಈ ಪ್ರಕರಣಗಳ ತನಿಖೆ ಮಾಡಲೆಂದೇ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಆದರೆ, ಎಸ್ಐಟಿಯು ಕೇವಲ ಒಂದು ಎಫ್ಐಆರ್ ದಾಖಲಿಸಿದೆ. ಉಳಿದ 74 ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಇಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠದಲ್ಲಿ ಈ ಕುರಿತು ವಾದ ಮಂಡಿಸಿದ ಎಸ್ ಬಾಲನ್, "ಒಂದು ಸಣ್ಣ ಗ್ರಾಮದಲ್ಲಿ 74 ಅಸಹಜ ಸಾವು ಸಂಭವಿಸಿದ್ದು, ಒಂದು ಎಫ್ಐಆರ್ ಮೂಲಕ ಅದರ ಕ್ರಿಮಿನಲ್ ವಿಚಾರಣೆ ನಡೆದಿದೆ‌. ಇದು ಸರಿಯಾದ ಕ್ರಮವಲ್ಲ" ಎಂದರು.

ಸರ್ಕಾರದ ಪರ ವಕೀಲರು ಮಧ್ಯಪ್ರವೇಶಿಸಿ "ಸರ್ಕಾರಕ್ಕೆ ಇನ್ನೂ ಪ್ರಕರಣದ ದಾಖಲೆ ಸಲ್ಲಿಸಿಲ್ಲ. ದಾಖಲೆ ಇಲ್ಲದೇ ಸರ್ಕಾರ ಅಭಿಪ್ರಾಯ ಹೇಳಲು ಹೇಗೆ ಸಾದ್ಯ?" ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, "ಪ್ರಕರಣ ಇರುವುದು, 74 ಅಸಹಜ ಸಾವುಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ ಎನ್ನುವುದು. ಸರ್ಕಾರವು ನ್ಯಾಯಾಲಯದಲ್ಲಿರುವ ದಾಖಲೆಯನ್ನೇ ಪಡೆದುಕೊಂಡು ಅಭಿಪ್ರಾಯ ಸಲ್ಲಿಸಿ" ಎಂದು ಸರ್ಕಾರಕ್ಕೆ ಸೂಚಿಸಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಫೆಬ್ರವರಿ 03 ಕ್ಕೆ ಮುಂದೂಡಿದ್ದು, ಅಂದು ವಿಸ್ತೃತ ವಿಚಾರಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News