×
Ad

ಅಡ್ಡೂರು ಸರಕಾರಿ ಶಾಲೆಯ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ

Update: 2025-06-24 11:54 IST

ಮಂಗಳೂರು: ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನೂತನ ಆಂಗ್ಲ ಮಾಧ್ಯಮ ತರಗತಿಗಳ ಸೇರ್ಪಡೆಯ ಉದ್ಘಾಟನೆ ಕಾರ್ಯಕ್ರಮ ಸೋಮವಾರ ಜರುಗಿತು.

ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ಊರಿನ ಅಭಿವೃದ್ಧಿ ಶಿಕ್ಷಣಕ್ಕೆ ನೀಡುವ ಮಹತ್ವದ ಮೇಲೆ ನಿರ್ಧಾರವಾಗುತ್ತದೆ. ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯ ಮಾಡುವುದಿಲ್ಲ. ಸರಕಾರಿ ಶಾಲೆಯ ಉದ್ಧಾರಕ್ಕೆ ನನ್ನ ಕೈಲಾದ ಸಹಾಯ ಸಹಕಾರ ಖಂಡಿತವಾಗಿಯೂ ಮಾಡುವೆ. ರಾಜಕೀಯವನ್ನು ಶಾಲೆಯ ವಠಾರದಿಂದ ಹೊರಗಿಟ್ಟು ಬಂದರೆ ಖಂಡಿತ ಶಾಲೆ ಅಭಿವೃದ್ಧಿಯಾಗುತ್ತದೆ. ಅಡ್ಡೂರು ಶಾಲೆಯ ಹಳೆ ವಿದ್ಯಾರ್ಥಿಗಳು, ಕೊಡುಗೈ ದಾನಿಗಳ ಕಾಳಜಿ, ಮುತುವರ್ಜಿ ಶ್ಲಾಘನೀಯ ಎಂದರು.

 

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ, ಶಿಕ್ಷಣ ಪೋಷಕ ಝಕರಿಯಾ ಜೋಕಟ್ಟೆ ಮಾತನಾಡಿ, "ನಾನು ಅಡ್ಡೂರಿನ ಅಳಿಯ, ನನ್ನ ಪತ್ನಿ, ಮಾವ, ಅತ್ತೆ ಎಲ್ಲರೂ ಅಡ್ಡೂರಿನವರು. ನನ್ನ ಪತ್ನಿಯ ಆಶಯದಂತೆ ನನ್ನ ಮಾವ ಮತ್ತು ಅತ್ತೆಯ ನೆನಪಿಗಾಗಿ ಅಡ್ಡೂರು ಸರಕಾರಿ ಶಾಲೆಗೆ ಸುಸಜ್ಜಿತವಾದ ಐದು ತರಗತಿಗಳ ನೆಲಮಹಡಿ ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು.

 

ವಿದ್ಯೆಗೆ ಪೋಷಣೆ ನೀಡುವ ಹಲವು ಕಾರ್ಯಕ್ರಮಗಳನ್ನು ನಾವು ಅತ್ಯಂತ ಸಂತೋಷದಿಂದ ಮಾಡುತ್ತಾ ಬಂದಿದ್ದೇವೆ, ಇನ್ನೂ ಮುಂದುವರಿಸುತ್ತೇವೆ, ಅಡ್ಡೂರಿನ ಈ ಶಾಲೆಯಲ್ಲಿ ಉತ್ತಮ ಶಿಕ್ಷಕರ ನೇಮಕವಾಗಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಝಕರಿಯಾ ಜೋಕಟ್ಟೆ ಹಾರೈಸಿದರು.

 

ಅಡ್ಡೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರು ಮಾತನಾಡಿ, 1967ರಲ್ಲಿ ಕಡಂಬಾರು ಕುಟುಂಬದವರು ದಾನವಾಗಿ ನೀಡಿದ ಜಾಗದಲ್ಲಿ ಪ್ರಾರಂಭವಾದ ಅಡ್ಡೂರು ಸರಕಾರಿ ಶಾಲೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ನೀಡಿದೆ. ನಾನೂ ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿ ಎಂದರು.

 

ನಮ್ಮ ನೆಚ್ಚಿನ ಸರಕಾರಿ ಶಾಲೆ ಮುಚ್ಚಿ ಹೋಗದಂತೆ ನೋಡಿಕೊಂಡು, ಆಂಗ್ಲ ಮಾಧ್ಯಮ ಅನುಮತಿಗಾಗಿ ಜಾತಿ ಧರ್ಮ ಭೇದಭಾವವಿಲ್ಲದೆ ಶ್ರಮಿಸಿದ ಅಡ್ಡೂರಿನ ಎಲ್ಲಾ ನಾಗರಿಕರು, ಸ್ಥಳೀಯ ಸಂಘಸಂಸ್ಥೆಗಳು, ಅಡ್ಡೂರು ಸೆಂಟ್ರಲ್ ಕಮಿಟಿ, ನಮ್ಮ ಶಾಸಕರಾದ ಡಾ.ಭರತ್ ಶೆಟ್ಟಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು.

ಶಾಲೆಯ ಆಂಗ್ಲ ಮಾಧ್ಯಮದ ಕಟ್ಟಡದ ನೆಲ ಮಹಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತ ಕೊಡುಗೈ ದಾನಿ ಝಕರಿಯಾ ಜೋಕಟ್ಟೆಯವರಿಗೆ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ, ನಿಮ್ಮ ಈ ಕೊಡುಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್. ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯ ನೆಲಮಹಡಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಝಕರಿಯಾ ಜೋಕಟ್ಟೆಯವರನ್ನು ಶ್ಲಾಘಿಸಿದರು.

ಹಿದಾಯತ್ ಅಡ್ಡೂರು ಮತ್ತು ತಂಡದವರು ನಿರಂತರ, ನಿಸ್ವಾರ್ಥ ಪ್ರಯತ್ನದಿಂದ ಇಂದು ಈ ತರಗತಿ ಉದ್ಘಾಟನೆ ಸಾಧ್ಯವಾಗಿದೆ. ವಿದೇಶದಲ್ಲಿದ್ದುಕೊಂಡೇ ಶಿಕ್ಷಣ ಸಚಿವರಿಗೆ, ಸ್ಪೀಕರ್ ಅವರಿಗೆ, ಶಾಸಕರಿಗೆ ಕರೆ ಮಾಡಿ ಅನುಮತಿ ಪತ್ರ ಸಿಗುವವರೆಗೂ ಅಹರ್ನಿಶಿ ಪ್ರಯತ್ನ ಮಾಡಿದ್ದಾರೆ. ಹಾಗೂ ಸ್ಥಳೀಯ ಯುವಕರ ಸಂಸ್ಥೆಗಳಂತೂ ಒಗ್ಗಟ್ಟಾಗಿ ಕೆಲಸ ಮಾಡಿದೆ, ದುಡಿದಿದ್ದಾರೆ. ಇಂತಹ ಉತ್ತಮ ಪೋಷಕರಿರುವ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ" ಎಂದು ಹಾರೈಸಿದರು.

ಅಡ್ಡೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎಂ., ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯು.ಪಿ.ಇಬ್ರಾಹೀಂ, ಉದ್ಯಮಿ ಶೌಕತ್ ಅಲಿ, ಮುಹಮ್ಮದ್ ಅಶ್ರಫ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲೀಲಾವತಿ, ಅಡ್ಡೂರು ಸೆಂಟ್ರಲ್ ಕಮಿಟಿಯ ಅಬ್ದುಲ್ ರಝಾಕ್, ಬಾಲಕೃಷ್ಣ ರಾವ್ ನೂಯಿ, ಶಿಕ್ಷಕಿ ಆಸುರಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ದೇವಕಿ ವಂದಿಸಿದರು. ಶಿಕ್ಷಕಿ ನಮೃತಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News