×
Ad

ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ರವಿ ಕುಮಾರ್ ಆಗ್ರಹ

Update: 2025-10-13 18:14 IST

ರವಿ ಕುಮಾರ್

ಮಂಗಳೂರು : ಶತಮಾನೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ರವಿ ಕುಮಾರ್ ಆಗ್ರಹಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಅವರಿಗೆ ಆರೆಸ್ಸೆಸ್ ಬಗ್ಗೆ ಏನು ಗೊತ್ತಿಲ್ಲ. ಅವರೊಬ್ಬ ಅಜ್ಞಾನದ ಕೂಸು. ಅವರ ಹೇಳಿಕೆಯು ಸಂಘದ ಚಟುವಟಿಕೆಗಳ ಬಗ್ಗೆ ಅವರಿಗೆ ಅಜ್ಞಾನವನ್ನು ಎತ್ತಿ ತೋರಿಸುತ್ತಿದೆ. ದೇಶವ್ಯಾಪಿ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಆರೆಸ್ಸೆಸ್ ದೇಶಕ್ಕೆ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಇಬ್ಬರು ಪ್ರಧಾನಿಗಳನ್ನು ನೀಡಿದ ಸಂಘಟನೆಯಾಗಿದೆ. ಆದರೆ.  ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಧಿಕಾರದ ಅಮಲು, ಪಿತ್ತ ನೆತ್ತಿಗೇರಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ ಬಗ್ಗೆ ಕೆಟ್ಟದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಆರೆಸ್ಸೆಸ್ ಬಗ್ಗೆ ಮಾಜಿ ಪ್ರಧಾನಿಗಳಾದ ದಿವಂಗತ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಯಾವ ರೀತಿಯ ಉತ್ತಮ ನಿಲುವನ್ನು ಹೊಂದಿದ್ದರು ಎನ್ನುವ ಬಗ್ಗೆ ಪ್ರಿಯಾಂಕ್ ಖರ್ಗೆ ತಿಳಿದುಕೊಳ್ಳಲಿ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಮಾಹಿತಿ ಪಡೆಯಲಿ ಎಂದು ಹೇಳಿದರು.

ರಾಜ್ಯ ಸರಕಾರ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ದೇಶದ್ರೋಹಿ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲಿ. ತಾಕತ್ತಿದ್ದರೆ ಎಸ್‌ಡಿಪಿಐ ವಿರುದ್ಧ ಕ್ರಮ ಕೈಗೊಳ್ಳಲಿ. ಆರೆಸ್ಸೆಸ್ ದಂಡ ಹಿಡಿದು ಮೆರವಣಿಗೆ ನಡೆಸಿದರೆ ಯಾರಿಗೂ ನಷ್ಟವಾಗದು ಎಂದರು.

ದೇಶಭಕ್ತರ ಸಂಘಟನೆಯಾಗಿರುವ ಆರೆಸ್ಸೆಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಲಘವಾಗಿ ಮಾತನಾಡುವುದು ಸರಿಯಲ್ಲ. ಅವರಿಗೆ ತಿಳಿವಳಿಕೆಯ ಕೊರತೆ ಇದ್ದರೆ ಆರೆಸ್ಸೆಸ್ ನ  ಶಾಖೆಗೆ ಬರಲಿ ಅವರಲ್ಲಿರುವ ತಪ್ಪು ಕಲ್ಪನೆಯನ್ನು ನಿವಾರಿಸಲು ಒಬ್ಬ ಶಾಖಾ ಶಿಕ್ಷಕ ಸಾಕು ಎಂದು ರವಿಕುಮಾರ್ ಹೇಳಿದರು.

ಆರೆಸ್ಸೆಸ್ ನೋಂದಾಯಿತ ಸಂಘಟನೆಯಾಗಿದೆ. ಆರೆಸ್ಸೆಸ್ ಗೆ ಕಾಂಗ್ರೆಸ್‌ನ ಮನೆಯವರೇ ಹಣ ಕೊಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್ , ಡಾ.ಭರತ್ ಶೆಟ್ಟಿ ವೈ., ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ದ.ಕ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News