×
Ad

ಸಜೀಪದಲ್ಲಿ ಸ್ಕೂಟರ್ ಸವಾರರನ್ನು ಬೆನ್ನಟ್ಟಿದ ಹೆಲ್ಮೆಟ್ ಧರಿಸಿದ ವ್ಯಕ್ತಿ: ದೂರು ದಾಖಲು

Update: 2025-06-21 11:30 IST

ಸಜೀಪ ದೇರಾಜೆಯಲ್ಲಿ ತಲವಾರು ದಾಳಿ ನಡೆದಿರುವ ವದಂತಿ ಹರಡಿದ್ದರಿಂದ ಗುರುವಾರ ರಾತ್ರಿ ಸ್ಥಳದಲ್ಲಿ ಜನರು ಜಮಾವಣೆಗೊಂಡಿದ್ದರು.

ಬಂಟ್ವಾಳ: ಸಜೀಪದ ದೇರಾಜೆಯ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೋರ್ವ ಅಟ್ಟಿಸಿಕೊಂಡು ಬಂದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಗುರುವಾರ ರಾತ್ರಿ ಸಜೀಪದಲ್ಲಿ ಇಬ್ಬರ ಮೇಲೆ ತಲವಾರು ದಾಳಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಳೆದ(ಜೂ.20) ರಾತ್ರಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರ ಮೇಲೆ ಸಜೀಪದ ದೇರಾಜೆ ಎಂಬಲ್ಲಿ ತಲವಾರು ದಾಳಿ ಯತ್ನ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಘಟನಾ ಸ್ಥಳದಲ್ಲಿ ಜನರು ಜಮಾವಣೆಗೆ ಕಾರಣವಾಗಿತ್ತು. ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಸಜೀಪ ದೇರಾಜೆಯಲ್ಲಿ ಗುರುವಾರ ರಾತ್ರಿ ತಲವಾರು ದಾಳಿಯಂತಹ ಘಟನೆ ನಡೆದಿಲ್ಲ. ಆದರೆ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬೊಳಿಯಾರು ಕಡೆಯಿಂದ ಮೆಲ್ಕಾರ್ ನತ್ತ ಸಂಬಂಧಿಕರೊಬ್ಬರ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ದೇರಾಜೆಯಲ್ಲಿ ಹೆಲ್ಮೆಟ್ ಧರಿಸಿ ಸ್ಕೂಟರ್ ನಲ್ಲಿ ಕುಳಿತಿದ್ದ ಇಬ್ಬರ ಪೈಕಿ ಓರ್ವ ತಮ್ಮನ್ನು ಅಟ್ಟಿಸಿಕೊಂಡು ಬಂದಿರುವುದಾಗಿ ಮುಹಮ್ಮದ್ ಮಕ್ಬೂಲ್ ಎಂಬವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ದೂರುದಾರ ಮಕ್ಬೂಲ್ ರನ್ನು ವಿಚಾರಣೆ ನಡೆಸಿದಾಗ, "ದೇರಾಜೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಸ್ಕೂಟರ್ ನಿಂದ ತಮ್ಮ ಸ್ಕೂಟರ್ ನತ್ತ ಓಡಿ ಬರುತ್ತಿದ್ದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯ ಕೈಯಲ್ಲಿ ತಲವಾರು ಅಥವಾ ಯಾವುದೇ ಮಾರಕಾಯುಧ ಇತ್ತೇ ಎಂಬುದನ್ನು ನಾನು ನೋಡಿಲ್ಲ. ಆತ ಓಡಿ ಬರುತ್ತಿರುವುದನ್ನು ಗಮನಿಸಿದ ನಾನು, ಸ್ಕೂಟರ್ ಚಲಾಯಿಸುತ್ತಿದ್ದ ನನ್ನ ಸಂಬಂಧಿಕನಲ್ಲಿ ವೇಗವಾಗಿ ಹೋಗುವಂತೆ ಸೂಚಿಸಿದೆ. ಆ ಬಳಿಕ ನಾವು ಹಿಂದಿರುಗಿ ನೋಡದೇ ನಂದಾವರದ ಮನೆಗೆ ತೆರಳಿ ಮನೆಮಂದಿಗೆ ಮಾಹಿತಿ ನೀಡಿದೆವು. ಈ ಬಗ್ಗೆ ವಾಟ್ಸ್ ಆ್ಯಪ್ ಗಳಲ್ಲಿ ವೈರಲ್ ಆಗುತ್ತಿರುವ ತಲವಾರು ದಾಳಿ ಎಂಬ ಸುಳ್ಳುಸುದ್ದಿಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ ಹಾಗೂ ನಾನು ಸ್ಥಳದಲ್ಲಿ ಜನರನ್ನು ಜಮಾವಣೆಗೊಳಿಸಿಲ್ಲ'' ಎಂದು ತಿಳಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಮಕ್ಬೂಲ್ ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಕಳೆದ ವಾರ ಸಜೀಪದ ದೇರಾಜೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣ ಹಾಗೂ ಬಕ್ರೀದ್ ಸಂದರ್ಭದಲ್ಲಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳದ ಸಮೀಪ ಸಿಕ್ಕಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳಿಗೂ ದೂರುದಾರರು ನೀಡಿರುವ ದೂರಿಗೂ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಪರಿಶೀಲನೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News