ವಿದ್ಯೆ ನೀಡಿದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಮನಸ್ಸು ಮಾಡಿ: ಡಾ. ಇಸ್ಮಾಯೀಲ್
ಮಂಗಳೂರು| ಬದ್ರಿಯಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾವೇಶ
ಮಂಗಳೂರು, ಸೆ.19: ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಆದರೆ ಕಾಲಕ್ಕೆ ಅನುಗುಣವಾಗಿ ಬೆಳೆದಿಲ್ಲ ಎಂಬ ಬೇಸರವೂ ಇದೆ. ಹಾಗಂತ ಸುಮ್ಮನಿರದೆ ಇದರ ಅಭಿವೃದ್ಧಿಗೆ ಇಲ್ಲಿನ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯು ಶ್ರಮಿಸಬೇಕು. ಅದಕ್ಕಾಗಿ ನೀವು ನಿಮ್ಮ ಬುದ್ಧಿ ಉಪಯೋಗಿಸಿ, ಹೃದಯ ವಿಶಾಲಗೊಳಿಸಿ, ಮನಸ್ಸು ಮಾಡಿ ಎಂದು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್. ಇಸ್ಮಾಯೀಲ್ ಕರೆ ನೀಡಿದರು.
ನಗರದ ಬಂದರ್ ಕಂದಕ್‌ನಲ್ಲಿರುವ ಅಲ್ ಬದ್ರಿಯಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ರೂಪಿಸುವ ಸಲು ವಾಗಿ ಶುಕ್ರವಾರ ಬದ್ರಿಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದ್ರಿಯಾ ಶಿಕ್ಷಣ ಸಂಸ್ಥೆಯು ನಿಮಗೆ ಎಲ್ಲವನ್ನೂ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ನೀವು ಏನು ಕೊಡಬೇಕು ಎಂಬು ದನ್ನು ನಿರ್ಧರಿಸಿ. ಉಚಿತ ಶಿಕ್ಷಣ ನೀಡುವುದೇ ಈ ಸಂಸ್ಥೆಯ ರೂವಾರಿಗಳ ಕನಸಾಗಿತ್ತು. ಲಾಭದ ಉದ್ದೇಶ ಅವರಿಗೆ ಮುಖ್ಯವಾಗಿರಲಿಲ್ಲ. ಆರ್ಥಿಕವಾಗಿ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಹಿರಿಯರ ಕನಸನ್ನು ನಾವೆಲ್ಲಾ ಮುಂದುವರಿಸಬೇಕಿದೆ. ಆರಂಭದಲ್ಲಿ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಹಾಗಂತ ನಿರಾಶರಾಗದೆ ಮಂಗಳೂರಿನ ಇತರ ಶಿಕ್ಷಣ ಸಂಸ್ಥೆಗಳಿಗೆ ಸರಿಸಾಟಿಯಾಗಿ ಈ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಿದೆ ಎಂದು ಡಾ. ಎನ್. ಇಸ್ಮಾಯೀಲ್ ಹೇಳಿದರು.
ಕಾಲೇಜಿನ ನಿವೃತ್ತ ಉಪನ್ಯಾಸಕ ಸೈಯದ್ ಅಥಾವುಲ್ಲಾ ತಂಙಳ್ ನೂತನ ವೆಬ್‌ಸೈಟ್ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ರಹ್ಮತ್ ಅಲಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಸೀಮಾ ಎ.ಕೆ., ಪ್ರೌಢಶಾಲೆಯ ಆಂಗ್ಲಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಸರಳಾ ವರ್ಗಿಸ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಶಾಲಿನಿ ಕೆ., ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನುಝ್ರತುನ್ನಿಸಾ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಮತ್ತು ಉದ್ಯಮಿಗಳಾದ ಆಸಿಫ್ ಅಮ್ಯಾಕೊ, ಖಲೀಲ್, ಎಸ್.ಎಂ. ಫಾರೂಕ್ ಮತ್ತಿತರರು ಬದ್ರಿಯಾ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದರಲ್ಲದೆ ಯೋಜನೆಗಳನ್ನು ಜಾರಿಗೊಳಿಸಲು ಸರ್ವರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಉದ್ಯಮಿ ಹಸನ್ ಶಹೀದ್ ಸ್ವಾಗತಿಸಿದರು. ಸುಹೈಲ್ ಸಹಾಲ್ ಕಿರಾಅತ್ ಪಠಿಸಿದರು. ಹಳೆ ವಿದ್ಯಾರ್ಥಿಗಳಾದ ಮುಹಮ್ಮದ್ ಮುಸ್ತಫಾ ವಂದಿಸಿದರು. ಸಾಹಿಲ್ ಜಹೀರ್ ಕಾರ್ಯಕ್ರಮ ನಿರೂಪಿಸಿದರು.
"ಶತಮಾನೋತ್ಸವದ ಹೊಸ್ತಿಲಲ್ಲಿರುವ ಬದ್ರಿಯಾ ಶಿಕ್ಷಣ ಸಂಸ್ಥೆಗೆ ಆಧುನಿಕ ಸ್ಪರ್ಶ ನೀಡಬೇಕಿದೆ. ಅದಕ್ಕೆ ಹಳೆ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿದೆ. ಈ ಸಂಸ್ಥೆಗಾಗಿ ಹಿರಿಯರು ವ್ಯಯಿಸಿದ ಶ್ರಮವನ್ನು ಯಾವ ಕಾರಣಕ್ಕೂ ವ್ಯರ್ಥಗೊಳಿಸಲು ಬಿಡಬಾರದು. ಮುಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನಾವೆಲ್ಲಾ ಕಟಿಬದ್ಧರಾಗಿರಬೇಕು".
-ಮುಹಮ್ಮದ್ ಕುಂಞಿ, ಹಳೆ ವಿದ್ಯಾರ್ಥಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ
"ಮೂಲಭೂತ ಸೌಕರ್ಯ ಕಲ್ಪಿಸುವುದರೊಂದಿಗೆ ಈ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದಲ್ಲದೆ ನಗರದಿಂದ ಹೊರ ಭಾಗದಲ್ಲಿ 10 ಎಕರೆ ಜಮೀನು ಖರೀದಿಸಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಗುರಿ ಹಾಕಬೇಕಿದೆ".
-ಹಂಝ ಯು.ಎನ್., ನಿವೃತ್ತ ಪ್ರಾಂಶುಪಾಲರು, ಬದ್ರಿಯಾ ಕಾಲೇಜು
"ನಗರದ ಇತರ ಕಾಲೇಜಿನಿಂದ ತಿರಸ್ಕರಿಸಲ್ಪಟ್ಟ ವಿದ್ಯಾರ್ಥಿಗಳನ್ನು ಬದ್ರಿಯಾ ಶಿಕ್ಷಣ ಸಂಸ್ಥೆಯು ಬರಮಾಡಿ ಕೊಂಡಿದೆ. ನಾವಿಂದು ಸಮಾಜದಲ್ಲಿ ಗುರುತಿಸಿಕೊಳ್ಳಲು, ನಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ಈ ಶಿಕ್ಷಣ ಸಂಸ್ಥೆಯ ಪಾತ್ರ ಅಪಾರವಿದೆ. ನಾವು ಇಲ್ಲಿಂದ ತುಂಬಾ ಪಡೆದಿದ್ದೇವೆ ಮತ್ತು ಅದನ್ನು ಮರಳಿಸಲೇಬೇಕಾಗಿದೆ. ಅದಕ್ಕಾಗಿ 2020-28ರ ಹಲವು ಯೋಜನೆಯೊಂದಿಗೆ ಶತಮಾನೋತ್ಸವ ಕಾರ್ಯಕ್ರಮ ಆಚರಿಸಲು ಸನ್ನದ್ಧರಾಗಬೇಕಿದೆ".
-ಸಾಜಿದ್ ಎ.ಕೆ., ಹಳೆ ವಿದ್ಯಾರ್ಥಿ ಮತ್ತು ಉದ್ಯಮಿ
"ಈವತ್ತಿನ ಈ ಸಮಾಗಮವು ನಮ್ಮ ಪಾಲಿಗೆ ಹೊಸ ತಿರುವು ಆಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ನಾಡಿನಾದ್ಯಂತ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪೈಕಿ ಸಾವಿರಾರು ಮಂದಿಯನ್ನು ಸೀಮಿತ ಅವಧಿಯಲ್ಲಿ ಸಂಪರ್ಕಿ ಸಿದ್ದೇವೆ. ಮುಂದಿನ ದಿನಗಳಲ್ಲಿ ಬದ್ರಿಯಾ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ನಾವೆಲ್ಲಾ ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ".
-ಸಂಶುದ್ದೀನ್, ಹಳೆ ವಿದ್ಯಾರ್ಥಿ ಮತ್ತು ಉದ್ಯಮಿ