ಮಂಗಳೂರು: ಸೇತುವೆಯಿಂದ ಹಾರಿದ್ದ ವೃದ್ಧನ ಜೀವ ಉಳಿಸಿದ 112 ಸಹಾಯವಾಣಿ
Mangaluru: 112 helpline saves life of elderly man who jumped off bridge
ಮಂಗಳೂರು, ಆ.5: ಪಾವಂಜೆಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವೃದ್ಧರೊಬ್ಬರನ್ನು 112 ಪೊಲೀಸ್ ಸಹಾಯವಾಣಿಯು ರಕ್ಷಿಸಿದ ಬಗ್ಗೆ ವರದಿಯಾಗಿದೆ.
ನಗರದ ಪಿ.ವಿ.ಎಸ್ ಕಲಾಕುಂಜದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ (75) ಎಂಬವರು ಆ.4ರಂದು ಬೆಳಗ್ಗೆ ಕುದ್ರೋಳಿ ದೇವಸ್ಥಾನಕ್ಕೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂಬುದಾಗಿ ನಿತಿನ್ ಎಂಬವರು ಬರ್ಕೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಬರ್ಕೆ ಠಾಣೆಯ ಎಎಸ್ಸೈ ಸುಧಾಕರ್ ಪೊಲೀಸ್ ಸಹಾಯವಾಣಿ 112ಕ್ಕೆ ಮಾಹಿತಿ ರವಾನಿಸಿದರು. ಈ ವೇಳೆ ಮುಲ್ಕಿ ಠಾಣಾ ವ್ಯಾಪ್ತಿಯ ಸಹಾಯವಾಣಿ 112ರಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ ಸ್ಟೇಬಲ್ಗಳಾದ ಯೊಗೀಶ್, ಕಿಶೋರ್ ಕುಮಾರ್ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಮಧುಕರ್ ತಕ್ಷಣ ಕಾರ್ಯಪ್ರವೃತ್ತರಾಗಿ ಪಾವಂಜೆ ಸೇತುವೆಯ ಬಳಿ ತೆರಳಿದರು. ಅಲ್ಲಿ ನದಿಗೆ ಹಾರಲು ಯತ್ನಿಸುತ್ತಿದ್ದ ವಿಶ್ವನಾಥ ಶೆಟ್ಟಿಯನ್ನು ಸಾರ್ವಜನಿಕರ ಸಹಾಯದಿಂದ ತಡೆದು ಜೀವರಕ್ಷಣೆ ಮಾಡಿದ್ದಾರೆ.
ಬಳಿಕ ವಿಶ್ವನಾಥ ಶೆಟ್ಟಿಯ ಸಹೋದರಿ ವಾಣಿ ಶೆಟ್ಟಿ ಹಾಗೂ ಮಾಜಿ ಕಾರ್ಪೊರೇಟರ್ ಪ್ರಕಾಶ್ ರ ಜೊತೆಗೆ ಕಳುಹಿಸಿಕೊಡಲಾಗಿದೆ. ಚರ್ಮದ ಖಾಯಿಲೆಯಿಂದ ಮನ ನೊಂದಿದ್ದ ವಿಶ್ವನಾಥ ಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.