ಮಂಗಳೂರು: ವಲಸೆ ಕಾರ್ಮಿಕನ ಮೇಲೆ ಹಲ್ಲೆ ಆರೋಪ; ನಾಲ್ವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ, ನಾಲ್ವರು ವ್ಯಕ್ತಿಗಳು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್, ಮೋಹನ್ ಎಂದು ಗುರುತಿಸಲಾಗಿದೆ.
ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ಈ ನಾಲ್ವರು ಆರೋಪಿಗಳು ಸತತವಾಗಿ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಆರೋಪಿಸಿ ಹಲ್ಲೆ ನಡೆಸುತ್ತಿದ್ದರು. ತಾನು ಜಾರ್ಖಂಡ್ ಮೂಲದವನೆಂದು ತಿಳಿಸಿದರೂ ಆರೋಪಿಗಳು ಕೇಳದೆ, ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುತ್ತಾ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ.
ಹಲ್ಲೆ ಮತ್ತು ಮಾನಸಿಕ ಹಿಂಸೆಗೆ ಒಳಗಾದ ದಿಲ್‌ಜಾನ್ ಅನ್ಸಾರಿ ದುಷ್ಕರ್ಮಿಗಳ ಭಯದಿಂದ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಲಸೆ ಕಾರ್ಮಿಕನನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.