×
Ad

ಮಂಗಳೂರು | ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಮುಸ್ಲಿಮ್ ಧಾರ್ಮಿಕ ವಿದ್ವಾಂಸರ ಕಾಲ್ನಡಿಗೆ ಜಾಥಾ, ಪ್ರತಿಭಟನೆ

Update: 2025-03-09 15:18 IST

ಮಂಗಳೂರು, ಮಾ.9: ಸಂವಿಧಾನದತ್ತ ನೀಡಿದ ಹಕ್ಕನ್ನು ಕೇಳಲು ಸಾವು ಸೇರಿದ್ದೇವೆ. ಈ ಹೋರಾಟ ಯಾರ ವಿರುದ್ಧವೂ ಅಲ್ಲ. ಶರೀಅತ್ ನ ಹಕ್ಕಿಗಾಗಿನ ನಮ್ಮ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಉಲಮಾ ಕೋ ಆರ್ಡಿನೇಷನ್ ಕರ್ನಾಟಕ ಇದರ ಕೋಶಾಧಿಕಾರಿ ಶಾಫಿ ಸಅದಿ ಬೆಂಗಳೂರು ಹೇಳಿದ್ದಾರೆ.

 ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ನಗರದಲ್ಲಿ ರವಿವಾರ ನಡೆದ ಮುಸ್ಲಿಮ್ ಧಾರ್ಮಿಕ ವಿದ್ವಾಂಸರ ಕಾಲ್ನಡಿಗೆ ಜಾಥಾ, ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

 ನಗರದ ಮಿಲಾಗ್ರಿಸ್ನಿಂದ ಕ್ಲಾಕ್ ಟವರ್ ತನಕ ನಡೆದ ಜಾಥಾದ ಬಳಿಕ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಫಿ ಸಅದಿ, ನಮ್ಮ ಪೂರ್ವಿಕರು ನಮಗೆ ಕೊಟ್ಟಿರುವ ಆಸ್ತಿಯ ಮೇಲೆ ನೀವು ಯಾಕೆ ಕಣ್ಣು ಹಾಕಿರುವಿರಿ?. ಸರಕಾರದ ಕೆಲಸ ಅಭಿವೃದ್ಧಿ ಕಾರ್ಯ ಮಾಡುವುದು, ಕೆಲಸವಿಲ್ಲದವರಿಗೆ ಕೆಲಸ ಕಲ್ಪಿಸುವುದು, ಎಲ್ಲರ ನಡುವೆ ಸೌಹಾರ್ದ ಮೂಡಿಸುವುದು ಆಗಿದೆ. ಅದನ್ನು ವಿವಾದಿತ ಹಿಜಾಬ್, ವಕ್ಫ್, ಸಿಎಎ, ಎನ್.ಆರ್.ಸಿ. ಬಗ್ಗೆ ವಿವಾದವನ್ನುಂಟು ಮಾಡುತ್ತೀರುವಿರಿ. ಇದರಿಂದ ದೇಶಕ್ಕೆ ಏನು ಪ್ರಯೋಜನ ಇಲ್ಲ ಎಂದರು.

 ಉಲಮಾ ಕೋ ಆರ್ಡಿನೇಷನ್ನ ಕಾರ್ಯದರ್ಶಿ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ವಕ್ಫ್ ಅನ್ನು ಅಮಾನ್ಯ ಮಾಡುವುದಕ್ಕಾಗಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ವಕ್ಫ್ ನಲ್ಲಿ ಇದೀಗ ಸರಕಾರ ತರುಲು ಉದ್ದೇಶಿಸಿರುವುದು ಸುಧಾರಣೆಯಲ್ಲ. ನಿರ್ಮೂಲನೆ ಎಂದು ಟೀಕಿಸಿದ ಅವರು, ಪದೇ ಪದೇ ಒಂದಲ್ಲ ಒಂದು ಸಮಸ್ಯೆಗಳಲ್ಲಿ ನಮ್ಮನ್ನು ಯಾಕೆ ಸಿಲುಕಿಸುತ್ತೀರಿ ಎಂದು ಸರಕಾರವನ್ನು ಪ್ರಶ್ನಿಸಿದರು.

ವಕ್ಫ್ ತಿದ್ದುಪಡಿ ಮಸೂದೆಯು ದೇಶದ ಮುಸ್ಲಿಮರ ವಿರುದ್ಧ ಹೆಣೆದ ಷಡ್ಯಂತ್ರವಾಗಿದೆ. ಹಿಡನ್ ಅಜೆಂಡ್ ಆಗಿದೆ. ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರನ್ನು ಖಾಸಗಿಗೆ ಮಾರಾಟ ಮಾಡಿರುವ ಕೇಂದ್ರ ಸರಕಾರ ಇದೀಗ ವಕ್ಫ್ ಮೇಲೆ ಕಣ್ಣಿಟ್ಟಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರು ಮಸೀದಿ ಕಟ್ಟಲು ಮತ್ತು ಟಿಪ್ಪು ಸುಲ್ತಾನ್ ದೇವಸ್ಥಾನಕ್ಕಾಗಿ ಭೂಮಿ ಕೊಟ್ಟರು. ಮುಸ್ಲಿಮರು ಈ ದೇಶವನ್ನು ಆಳಿದ ಪೊರ್ಚುಗೇಸ್, ಡಚ್ಚರಿಗೆ, ಬ್ರಿಟಷರಿಗೆ, ಫ್ರೆಂಚರಿಗೆ ಶರಣಾಗಲಿಲ್ಲ. ಸ್ವಾತಂತ್ರ್ಯದ ಕೀಯನ್ನು ಕೊಡು ಎಂದು ಕೇಳಿದ ಮಹಮ್ಮದಲಿ ವಂಶದವರು ಎಂದರು. 

ಉಲಮಾ ಕೋ ಆರ್ಡಿನೇಷನ್ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿದರು.

ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷರುಗಳಾದ ಯು.ಕೆ.ಮುಹಮ್ಮದ್ ಸಅದಿ ವಳವೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ.ಉಸ್ಮಾನ್ ಫೈಝಿ ತೊಡಾರ್ ನೇತೃತ್ವ ವಹಿಸಿದ್ದರು.

ವಿದ್ವಾಂಸ ಕೆಎಂ ಅಬಬೂಬಕರ್ ಸಿದ್ದೀಕ್ ಮೋಂಟುಗೋಳಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವ ಮನವಿಯನ್ನು ವಾಚಿಸಿದರು.

ಐದು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News