×
Ad

ಮಂಗಳೂರಿನಲ್ಲಿ ಸುಸಜ್ಜಿತ ಡೇಟಾ ಸೆಂಟರ್: ಇನ್ನಷ್ಟು ಕ್ರಿಯಾ ಯೋಜನೆಗಳಿಗೆ ಸಂಜೀವ್ ಕುಮಾರ್ ಗುಪ್ತಾ ಸಲಹೆ

ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ‘ಟೈಕಾನ್ ಮಂಗಳೂರು 2026’ಗೆ ಚಾಲನೆ

Update: 2026-01-16 16:09 IST

ಮಂಗಳೂರು, ಜ.16: ಐಟಿ ವಲಯದ ಬೆಳವಣಿಗೆಯಲ್ಲಿ ದಾಪುಗಾಲಿಡುತ್ತಿರುವ ಮಂಗಳೂರಿನಲ್ಲಿ ಡೇಟಾ ಸೆಂಟರ್ ಸ್ಥಾಪನೆಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಬಗ್ಗೆ ಇನ್ನಷ್ಟು ಕ್ರಿಯಾ ಯೋಜನೆಗಳ ಅಗತ್ಯವಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ (ಕೆಡಿಇಎಂ)ನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಲಹೆ ನೀಡಿದ್ದಾರೆ.

ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಶುಕ್ರವಾರ ನಡೆದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ‘ಟೈಕಾನ್ ಮಂಗಳೂರು 2026’ರಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು.

ಈ ಕಾರ್ಯಕ್ರಮ ಮಂಗಳೂರು ಐಟಿ ವಲಯ ಹೊಸ ಅಲೆಯ ಆರಂಭವಾಗಿದೆ. ಐಟಿ ಕ್ಷೇತ್ರದಲ್ಲಿ ಮಂಗಳೂರು ಕೂಡಾ ದಾಪುಗಾಲಿಡುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 35 ಕಂಪೆನಿಗಳು ಕಾರ್ಯಾರಂಭಿಸಿದ್ದು, 10ಕ್ಕೂ ಅಧಿಕ ಜಿಸಿಸಿಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿವೆ. 1,000 ಕೋಟಿ ರೂ.ಗಳ ವ್ಯವಹಾರ ಸುಲಭದ ಮಾತಲ್ಲ. ಮಂಗಳೂರು ಐಟಿ ವಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದವರು ಹೇಳಿದರು. 

ಕಳೆದ ಒಂದೂವರೆ ವರ್ಷಗಳಲ್ಲಿ ಕರ್ನಾಟಕವು ಸ್ಟಾರ್ಟ್ಅಪ್ ವ್ಯವಸ್ಥೆಯ ವಿಶ್ವ ರ್ಯಾಂಕಿಂಗ್ನಲ್ಲಿ 21ನೇ ಸ್ಥಾನದಿಂದ 14ಕ್ಕೆ ಏರಿದೆ. ಭಾರತದಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂನಿಕಾರ್ನ್, ಟೆಕ್, ಪೇಟೆಂಟ್ ರಾಜಧಾನಿಯಾಗಿ ಹೊರಹೊಮ್ಮಿದೆ. ಮಂಗಳೂರು ಕೂಡಾ ಐಟಿ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದು, ಪ್ರಸಕ್ತ ಮಂಗಳೂರಿನಲ್ಲಿ ಐಟಿ ಕಂಪನಿಗಳಿಗೆ ಬೇಕಾದ 100 ಸಾವಿರ ಚದರ ಅಡಿಯ ಸುಸಜ್ಜಿತ ಮೂಲಸೌಕರ್ಯದ ವ್ಯವಸ್ಥೆ ಇದೆ. ಮುಂದಿನ ಒಂದು ವರ್ಷದಲ್ಲಿ ಇಲ್ಲಿ ಐದು ಐಟಿ ಪಾರ್ಕ್ಗಳು ತಲೆಯೆತ್ತಲಿವೆ. ಈ ಬೆಳವಣಿಗೆಯು 4,500 ಕೋಟಿ ರೂ.ಗಳ ವ್ಯವಹಾರದ ನಿರೀಕ್ಷೆಯನ್ನು ಹೊಂದಿದ್ದು, ಇದು 10,000 ಕೋಟಿ ರೂ.ಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

 ಮಂಗಳೂರು ಐಟಿ ವಲಯದಲ್ಲಿ ಕೈಗಾರಿಕಾ ಆಧರಿತ ಬೆಳವಣಿಗೆಯು ಇದಕ್ಕೆಲ್ಲಾ ಕಾರಣವಾಗಿದೆ. ಮಂಗಳೂರು ಹೊಸ ಅಲೆಯತ್ತ ಕೇವಲ ಹೂಡಿಕೆ ಆಕರ್ಷಣೆಯತ್ತ ಮಾತ್ರವಲ್ಲದೆ, ಐಟಿ ಕ್ಷೇತ್ರದಲ್ಲಿಯೂ ಹೊಸ ರೂಪು ಪಡೆಯುತ್ತಿದೆ. ವರ್ಕ್ ವರ್ಕ್ ನ ಸ್ಥಾಪಕ ರೋಹಿತ್ ಭಟ್ ರಂತೆ ಇನ್ನೂ ಹಲವು ಯುವ ಉದ್ಯಮಿಗಳು ಕೆಡಿಎಂ ಜತೆ ಕೈಜೋಡಿಸಬೇಕಾಗಿದೆ. ಮೂರು ವರ್ಷಗಳ ಹಿಂದೆ ಸಣ್ಣ ಮಗುವಿನಂತಿದ್ದ ಮಂಗಳೂರು ಐಟಿ ವಲಯ ಇಂದು ದೊಡ್ಡದಾಗಿ ಬೆಳೆದಿದೆ. ಇದು ಮತ್ತಷ್ಟು ಕ್ಷಿಪ್ರಗತಿಯಲ್ಲಿ ವೇಗ ಪಡೆದುಕೊಳ್ಳುವಲ್ಲಿ ಸರಕಾರದ ಜೊತೆ ಉದ್ದಿಮೆ ಹಾಗೂ ಉದ್ಯಮಿಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟೈ ಮಂಗಳೂರು ಚಾಪ್ಟರ ಸ್ಥಾಪಕಾಧ್ಯಕ್ಷ ರೋಹಿತ್ ಭಟ್, ಶೈಕ್ಷಣಿಕ ಹಬ್ ಆಗಿರುವ ಕರಾವಳಿಯ ವಿಶ್ವವಿದ್ಯಾನಿಲಯಗಳ ಜತೆ ಸಂಪರ್ಕವಿರಿಸಿಕೊಂಡು ಯುವ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಕೇವಲ ಉದ್ಯೋಗ ಗಳಿಸುವುದು ಮಾತ್ರವಲ್ಲ, ಉದ್ಯೋಗದಾತರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡುವ ನಿಟ್ಟಿನಲ್ಲಿ ಟೈ ಮಂಗಳೂರು ಕಾರ್ಯಪ್ರವೃತ್ತವಾಗಿದೆ. ಹೊಸ ಉದ್ಯಮ ಸೃಷ್ಟಿಗೆ ಮುಂದಾಗುವವರಿಗೆ ಸರಕಾರದಿಂದ ಪ್ರೋತ್ಸಾಹಧನ ಕೊಡಿಸುವಲ್ಲಿಯೂ ಟೈ ಮಂಗಳೂರು ಸಹಕರಿಸುತ್ತಿದೆ ಎಂದವರು ಹೇಳಿದರು.

ಹೆರಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

‘2024ರಲ್ಲಿ ಭಾರತ- ಟ್ರಿಲಿಯನ್ ಡಾಲರ್ ಅವಕಾಶಗಳು’ ಎಂಬ ವಿಷಯದಲ್ಲಿ ಮಾತನಾಡಿದ ಡೆಲಾಯ್ಟ್ ಸಂಸ್ಥೆಯ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಭಾರತವು ಜಿಸಿಸಿ (ಗ್ಲೋಬಲ್ ಕೆಪೆಬಲಿಟಿ ಸೆಂಟರ್)ಯ ಶಕ್ತಿಯಿಂದ ಕೂಡಿದೆ. ವಿಶ್ವದ ಜಿಸಿಸಿಗಳ ಪೈಕಿ ಶೇ.40ರಷ್ಟು ಭಾರತದಲ್ಲಿವೆ. ಸಾಮರ್ಥ್ಯದ ಲೆಕ್ಕಾಚಾರದಲ್ಲಿ ನಾವು ಮಾಡಿದ ಅಧ್ಯಯನ ಪ್ರಕಾರ 150ರಿಂದ 170 ಬಿಲಿಯನ್ ಡಾಲರ್ 2030ಗೆ 600 ಬಿಲಿಯನ್ ಡಾಲರ್ ಗೆ ತಲುಪಬೇಕಾಗಿದೆ. ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ನಾವು ಕಂಡುಕೊಂಡಂತೆ ಡಿಜಿಟಲ್ ಎಕನಾಮಿಕ್ ರೆನ್ (ಡಿಜಿಟಲ್ ಆರ್ಥಿಕ ವಲಯ) ಸೃಷ್ಟಿಸುವ ಅಗತ್ಯವಿದೆ. ಈ ಡಿಜಿಟಲ್ ಆರ್ಥಿಕ ವಲಯವು, ಜಿಸಿಸಿಗಳು, ಜಿಪಿಯು ಆಧಾರಿತ ಡೇಟಾ ಸೆಂಟರ್ಗಳು, ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರಬೇಕು ಎಂದರು.

ಮಂಗಳೂರಿಗೆ ಜಿಸಿಸಿಗಳ ಆಕರ್ಷಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಜಿಸಿಸಿಗಳು ನೇರವಾಗಿ ಮಂಗಳೂರಿಗೆ ಬರಲಾರವು. ಜಿಸಿಸಿ ಸಂಸ್ಥೆಗಳು ತಮ್ಮ ವ್ಯಾಪ್ತಿ ವಿಸ್ತರಣೆಗೆ ಮುಂದಾಗುವ ಸಂದರ್ಭ ಅವರನ್ನು ನಾವು ಗುರಿಯಾಗಿಸಿಕೊಳ್ಳಬೇಕು. ಈಗಾಗಲೇ ಸಿಲಿಕಾನ್ ಬೀಚ್ ಎಂಬ ಬ್ರಾಂಡ್ ನ ಮೂಲಕ ಐಟಿ ಕ್ಷೇತ್ರವನ್ನು ಕರಾವಳಿಯಲ್ಲಿ ವಿಸ್ತರಿಸಲು ಮುಂದಾಗಿರುವ ಸಂದರ್ಭ ಅವರಿಗೆ ಬೇಕಾದ ಸೌಲಭ್ಯಗಳು ಇಲ್ಲಿ ಲಭ್ಯವಾಗುವಂತೆ ಮಾಡಬೇಕಾಗಿದೆ. ಡೆಲಾಯ್ಟ್ ಸಂಸ್ಥೆ ಕೂಡಾ ಮಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಉತ್ಸುಕವಾಗಿದೆ ಎಂದು ಹೇಳಿದರು.

ಸ್ಟಾರ್ಟಪ್ ಗಳ ಬೆಳವಣಿಗೆಯ ಕುರಿತಾದ ಚರ್ಚಾಗೋಷ್ಠಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿ, ಕರಾವಳಿಗರಲ್ಲಿ ಉದ್ಯಮಶೀಲತೆ ಎಂಬುದು ರಕ್ತದಲ್ಲಿದೆ. ಬೊಳ್ಳು, ಮರಳಿ ಊರಿಗೆ ಎಂಬ ಹಲವು ಕಾರ್ಯಕ್ರಮಗಳ ಮೂಲಕ ಹೊರ ದೇಶ, ರಾಜ್ಯಗಳಲ್ಲಿರುವ ಪ್ರತಿಭೆಗಳನ್ನು ಮಂಗಳೂರಿಗೆ ಸೆಳೆದು ಇಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆ ಪ್ರೋತಾಹಿಸುವ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಮೆರಿಟೈಮ್ ಕ್ಷೇತ್ರದಲ್ಲಿ ಎಐ ಆಧಾರಿತ ಹೊಸ ಉಪಕ್ರಮಗಳನ್ನು ತೆರೆದಿಡಬೇಕಾಗಿದೆ. ನಮ್ಮದೇ ಆದ ಹೊಸ ಇನ್ಫೋಸಿಸ್, ಟಿಸಿಎಸ್ ನಂತಹ ಸಂಸ್ಥೆಗಳನ್ನು ನಾವು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.

ಇಲೆಕ್ಟ್ರಾನಿಕ್ಸ್ ಮತ್ತು ಐಚಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುದೀಪ್ ಶ್ರೀವಾಸ್ತವ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ನಿರಂತರ ಅನುಸರಣೆಯಿಂದ ಐಟಿ ಕ್ಷೇತ್ರಕ್ಕೆ ವೇಗ

ಮಂಗಳೂರಿನಲ್ಲೂ ಐಟಿ ಕ್ಷೇತ್ರ ವೇಗ ಪಡೆಯುತ್ತಿದೆ. ವರ್ಕ್ವರ್ಕ್ ನ ಸಂಸ್ಥಾಪಕ ರೋಹಿತ್ ಭಟ್ ಹಾಗೂ ಅವರ ತಂಡ ಈ ನಿಟ್ಟಿನಲ್ಲಿ ಅದ್ಭುತ ಕಾರ್ಯ ಮಾಡುತ್ತಿದೆ. ಸರಕಾರದಿಂದ ಐಟಿ ಕ್ಷೇತ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ನಿರಂತರ ಅನುಸರಣೆ ಅಗತ್ಯವಾಗಿದೆ. ಸರಕಾರಕ್ಕೆ ಹಲವು ಒತ್ತಡ, ಕೆಲಸವಿರುತ್ತದೆ. ಅದಕ್ಕಾಗಿ ನಾವಾಗಿಯೇ ನಮ್ಮ ಅಗತ್ಯಗಳನ್ನು ಸರಕಾರದಿಂದ ಕೇಳಿ ಪಡೆಯಬೇಕು. ನಿರಂತರ ಅನುಸರಣೆಯ ಮೂಲಕ ಈ ಕಾರ್ಯ ಆಗಬೇಕು ಎಂದು ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನದಾಸ್ ಪೈ ಹೇಳಿದರು.

ಕೆಡಿಇಎಂನ ಅಧ್ಯಕ್ಷ ಬಿ.ವಿ. ನಾಯ್ಡು ಜೊತೆ ‘ಸರಕಾರ ಸ್ಟಾರ್ಟ್ಅಪ್ ನಂತೆ ಯೋಚಿಸಬಲ್ಲುದೇ ಎಂಬ ವಿಚಾರದಲ್ಲಿ ನಡೆದ ಚರ್ಚಾಗೋಷ್ಠಿಯ ವೇಳೆ ಈ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸ್ವಂತ ಕಾರ್ಯಗಳಿಗೆ ಸರಕಾರದ ಮೇಲೆ ಒತ್ತಡ ಹೇರುವ ಬದಲು ಸಾರ್ವಜನಿಕ ಉದ್ದೇಶಗಳಿಗಾಗಿ ಒತ್ತಡ ಹೇರುವುದರಲ್ಲಿ ಯಾವುದೇ ತಪ್ಪಿಲ್ಲ. ಸಾಮಾಜಿಕ ವೇದಿಕೆಗಳ ಮೂಲಕ ನಮಗೆ ಅಗತ್ಯವಿರುವ ವಿಚಾರಗಳನ್ನು ಸರಕಾರದ ಮನದಟ್ಟು ಮಾಡುವ ಮೂಲಕ ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ಸ್ಟಾರ್ಟ್ಅಪ್ ಗಳಿಗೆ ವೇಗ ತುಂಬಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮಿಗಳು ಜನಪ್ರತಿನಿಧಿಗಳ ಜೊತೆ ಸಂಪರ್ಕ ಇರಿಸಿಕೊಂಡು ಮುಂದುವರಿಯಬೇಕಾಗಿದೆ. ಸಿಲಿಕಾನ್ ಬೀಚ್ನಂತೆ ಹೊಸ, ಅದ್ಭುತ ಚಿಂತನೆಗಳನ್ನು ಮಾಡಬೇಕು ಎಂದವರ ಸಲಹೆ ನೀಡಿದರು. 1 ಬ್ರಿಡ್ಜ್ ಸಂಸ್ಥೆಯ ಸಂಸ್ಥಾಪಕ ಮದನ್ ಪದಕಿ ಚರ್ಚಾಗೋಷ್ಠಿ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News