ಮಂಗಳೂರಿನಲ್ಲಿ ಮಾವು ಹಲಸು ವೈವಿಧ್ಯ: ಜನಸ್ಪಂದನೆ
ಮಂಗಳೂರು, ಜೂ. 21: ನಗರದ ಸೆಂಟ್ ಸೆಬಾಸ್ಟಿಯನ್ ಹಾಗೂ ಕದ್ರಿ ಕಂಬಳದ ಬಳಿ ನಡೆಯುತ್ತಿರುವ ಎರಡು ದಿನಗಳ ಮಾವು ಹಲಸು ವೈವಿಧ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಹನಿಜೆನಿಕ್ಸ್ ಬೀ ಫಾರ್ಮ್ಸ್ ಮತ್ತು ರೋಟರಿ ಇಂಟರ್ ನ್ಯಾಷನಲ್ ಮಂಗಳೂರು ವತಿಯಿಂದ ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’ ನಡೆಯುತ್ತಿದ್ದರೆ, ಕಲ್ಕೂರ ಪ್ರತಿಷ್ಠಾನ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಹಲಸು ಮೇಳವು ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜು ಪ್ರಾಸಾದ’ದ ಆವರಣದಲ್ಲಿ ಆಯೋಜಿಸಲಾಗಿದೆ.
ಎರಡೂ ಕಡೆಗಳಲ್ಲಿ ಮಾವು, ಹಲಸಿನ ಹಣ್ಣುಗಳ ಮಾರಾಟದ ಜತೆಗೆ ಇತರ ಉತ್ಪನ್ನಗಳ ಮಾರಾಟದಲ್ಲಿಯೂ ಅಪಾರ ಸಂಖ್ಯೆಯ ಗ್ರಾಹಕರು ಭಾಗವಹಿಸಿದ್ದಾರೆ. ಎರಡು ದಿನಗಳ ನಡೆಯಲಿರುವ ಈ ಪ್ರದರ್ಶನದಲ್ಲಿ ಹೊರ ಜಿಲ್ಲೆ ಹಾಗೂ ಜಿಲ್ಲೆಯ ನಾನಾ ಕಡೆಗಳಿಂದ ಸಾವಯವ ಕೃಷಿಕರು, ಮಾವು- ಹಲಸು, ರಾಂಬುಟಾನ್, ಅವಕಾಡೊ, ಡ್ರ್ಯಾಗನ್‌ಫ್ರೂಟ್ ಬೆಳೆಯುವ ರೈತರು ತಮ್ಮ ಉತ್ಪನ್ನಗಳು ಹಾಗೂ ಸಸಿಗಳೊಂದಿಗೆ ಆಗಮಿಸಿದ್ದಾರೆ.
ಸೆಂಟ್ ಸೆಬಾಸ್ಟಿಯನ್‌ನ ವಿಶಾಲವಾದ ಸಭಾಂಗಣದಲ್ಲಿ ನಡೆಯುತ್ತಿರುವ ‘ಕುಡ್ಲ ಪೆಲಕಾಯಿ ಪರ್ಬ’ದಲ್ಲಿ, ಜಯಶ್ರೀ ರಟ್ಟಿಹಳ್ಳಿಯವರ ಹಲಸಿನ ದೋಸೆ, ಇಡ್ಲಿ, ಕಬಾಬ್ ಸೇರಿದಂತೆ ವಿವಿಧ ಖಾದ್ಯಗಳ ಇನ್‌ಸ್ಟಂಟ್ ಮಿಕ್ಸ್‌ಗಳೂ ಲಭ್ಯವಿದ್ದರೆ, ಸ್ಥಳದಲ್ಲೇ ಮಾಡಿಕೊಂಡುವ ಹಲಸಿನ ಬಿಸಿಬಿಸಿ ಜಲೇಬಿ, ಹಲಸಿನ ಕೇಕ್, ಶೀರಾ, ಹಲಸಿನ ಪಲಾವ್, ಮ್ಯಾಂಗೋ ಮಿಲ್ಕ್‌ಶೇಕ್, ಸೇರಿದಂತೆ ಹಲಸಿನ ವೈವಿಧ್ಯಮಯ ತಿಂಡಿ ತಿನಿಸುಗಳು ಬಾಯಲ್ಲಿ ನೀರೂರಿಸುವಂತಿವೆ.
ರಾಮನಗರದ ರೈತರು ತಮ್ಮ ತೋಟದಲ್ಲಿ ಬೆಳೆಸಿದ 10ಕ್ಕೂ ವಿವಿಧ ಬಗೆಯ (ಮಲ್ಗೋವಾ, ಅಲ್ಫಾನ್ಸೋ, ಬಾದಾಮಿ, ರಸಬೂರಿ, ಕಾಲಪನ್, ಸಿರಿ) ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದು, ತುಮಕೂರಿನ ರೈತರು ಚಂದ್ರ, ರುದ್ರಾಕ್ಷಿ, ನಾಗು ಹಲಸು, ಶಂಕರ ಹಲಸಿನ ವ್ಯಾಪಾರ ನಡೆಸುತ್ತಿದ್ದಾರೆ.
ಆರ್ಕಿಡ್, ತಾವರೆ ಮೊದಲಾದ ಹೂವುಗಳ ಗಿಡಗಳ ಮಾರಾಟದ ಜತೆಗೆ ಕಲ್ಲಡ್ಕದ ನೇತ್ರಾವತಿ ನರ್ಸರಿಯವರು ಬೀಟ್‌ರೋಟ್ ಪೇರಳೆ ಸೇರಿದಂತೆ ವಿವಿಧ ತಳಿ, ಬಣ್ಣದ ಪೇರಳೆ ಗಿಡ, ಅವಕಾಡೊ, ಹಲಸು ಹಾಗೂ ಮಾವಿನ ವಿವಿಧ ತಳಿಯ ಗಿಡಗಳು, ಮಲ್ಬರಿ ಚಿಕನ್ ಕ್ಲಾವ್ ಮೊದಲಾದ ಗಿಡಗಳ ವೈವಿಧ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ.
‘ಮಂಜು ಪ್ರಾಸಾದ’ದ ಆವರಣದಲ್ಲಿ ನಡೆಯುತ್ತಿರುವ ಹಲಸು ಮೇಳದಲ್ಲಿ ಬಿಸಿಬಿಸಿ ಹಲಸಿನ ಹೋಳಿಗೆ ಹಾಗೂ ಸ್ಥಳೀಯವಾಗಿ ಬೆಳೆಯುವ ಹಲಸಿನ ಹಣ್ಣುಗಳಿಗೆ ಸಾರ್ವಜನಿಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಎರಡೂ ಕಡೆಗಳಲ್ಲಿ ರವಿವಾರ ರಾತ್ರಿಯವರೆಗೂ ಈ ಮೇಳ ನಡೆಯಲಿದೆ.