ಭಾರೀ ಮಳೆಗೆ ಉಳ್ಳಾಲದಲ್ಲಿ ಹಲವು ಮನೆಗಳು ಜಲಾವೃತ; ಜನರ ಸ್ಥಳಾಂತರ
ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಪರಿಣಾಮ ಉಳ್ಳಾಲದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಸುಮಾರು 100 ಮನೆಗಳಿಗೆ ನೀರು ನುಗ್ಗಿದೆ ಎಂದು ಅಂದಾಜಿಸಲಾಗಿದೆ.
ಕಲ್ಲಾಪು ಬಳಿ ಕೆಲವು ಮನೆಗಳು ಜಲಾವೃತವಾಗಿವೆ. ರೆಂಜಾಡಿ ಮನೆ ಸಮೀಪ ಗುಡ್ಡ ಜರಿದು ಬಿದ್ದಿದ್ದು, ಸಮೀಪದಲ್ಲಿ ಮನೆ ಇದ್ದರೂ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ಕುಟುಂಬ ರಾತ್ರಿ ವೇಳೆಯೇ ಸ್ಥಳಾಂತರಗೊಂಡಿದೆ.
ಮಂಜನಾಡಿ ಗ್ರಾಮದ ಉರುಮನೆಯ ಎಂ.ಎಚ್ ಬಾವ ಅವರ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಮನೆ ಅಪಾಯದಲ್ಲಿ ಇದೆ.
ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕೃತಕ ನೆರೆ ಆವರಿಸಿ ಸಂಚಾರಕ್ಕೆ ಅಡ್ಡಿಯಾಗಿದೆ. ಉಳ್ಳಾಲದಲ್ಲಿ ಜಲಾವೃತಗೊಂಡ ಮನೆಗಳ ಕುಟುಂಬಸ್ಥರು ರಾತ್ರಿ ವೇಳೆ ಸ್ಥಳಾಂತರಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್, ಕಂದಾಯ ನಿರೀಕ್ಷಕ ಪ್ರಮೋದ್, ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮೇಶ್ವರ
ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ, ಕೊಲ್ಯ ಬೈಪಾಸ್,ಕುದ್ರು , ಕೊಲ್ಲಂಗರೆ,ಉಚ್ಚಿಲ ಅಂಬಿಕಾ ರಸ್ತೆ,ಪ್ರದೇಶದಲ್ಲಿ ಕೃತಕ ನೆರೆ ಆವರಿಸಿದ್ದು,ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. 20 ಕುಟುಂಬಗಳನ್ನು ಬೋಟು ಮೂಲಕ ರಾತ್ರಿ ವೇಳೆ ಸ್ಥಳಾಂತರ ಮಾಡಲಾಗಿದೆ. ಕೆಲವು ಕುಟುಂಬಗಳು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿವೆ.
ಸೋಮೇಶ್ವರದಲ್ಲಿ ಮರ ಬಿದ್ದಿದ್ದು, ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ನಿಸರ್ಗ ಲೇಔಟ್ ನಲ್ಲಿ ಕಾಂಪೌಂಡ್ ಗೋಡೆ ಜರಿದು ಬಿದ್ದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್, ಕಂದಾಯ ನಿರೀಕ್ಷಕ ಪ್ರಮೋದ್, ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ರಾತ್ರಿ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಬೋಟು ವ್ಯವಸ್ಥೆ ಮಾಡಿ ಮನೆ ಸ್ಥಳಾಂತರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕೋಟೆಕಾರ್
ಕೋಟೆಕಾರ್: ಇಲ್ಲಿನ ಪ.ಪಂ. ವ್ಯಾಪ್ತಿಯ ಸಾಯಿಧಾಮ ಮಂದಿರ ಬಳಿ ಕೃತಕ ನೆರೆ ಆವರಿಸಿದೆ. ಬೀರಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕೃತಕ ನೆರೆ ಆವರಿಸಿದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದೆ.ಸಾಯಿ ನಗರದಲ್ಲಿ ಮನೆ ಬಿದ್ದು ಹಾನಿಯಾಗಿದೆ. ಮಾಡೂರು ಶಾಲೆ ಜಲಾವೃತಗೊಂಡಿವೆ. ರಸ್ತೆ ಬದಿಯಲ್ಲಿ ತೋಡಿನ ಸಮಸ್ಯೆ ಯಿಂದಾಗಿ ಕೆಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ದೇರಳಕಟ್ಟೆ
ಬೆಳ್ಮ ಗ್ರಾಮದ ಮಲ್ಲೂರು ಎಂಬಲ್ಲಿ ಮೊಹಮ್ಮದ್ ಖಾಸಿಂ ಎಂಬವರ ಮನೆಗೆ ಗುಡ್ಡ ಜರಿದು ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಯಾಗಿದೆ.ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಪ್ರಮೋದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಈ ಕುಟುಂಬ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿವೆ.