×
Ad

ಮೆಸ್‌ನ ಗುತ್ತಿಗೆದಾರಗೆ ವಂಚನೆ ಆರೋಪ: ಪ್ರಕರಣ ದಾಖಲು

Update: 2023-09-28 21:08 IST

ಮಂಗಳೂರು, ಸೆ.28: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾನಿಲಯದ ಜ್ಞಾನ ಸಂಗಮ ಕ್ಯಾಂಪಸ್‌ನ ವಿದ್ಯಾರ್ಥಿ ಗಳಿಗೆ ಆಹಾರ ಪೂರೈಸುವ ಮೆಸ್‌ನ ಗುತ್ತಿಗೆ ವಹಿಸಿಕೊಂಡಿರುವ ವ್ಯಕ್ತಿಗೆ ಅವರ ಮ್ಯಾನೇಜರ್ ಮತ್ತಿತರ ಇಬ್ಬರು ಸೇರಿ ಸುಮಾರು 30 ಲಕ್ಷ ರೂ. ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರೋಳಿಯಲ್ಲಿ ಸಂಸ್ಥೆ ಹೊಂದಿರುವ ಬಿ.ಸಚ್ಚಿದಾನಂದ ಶೆಟ್ಟಿ 2022ರ ಜ.1ರಿಂದ ಡಿ.31ರ ವರೆಗೆ ಮೆಸ್‌ಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿದ್ದರು. ತನ್ನ ಸಂಸ್ಥೆಯ ಸಿಬ್ಬಂದಿಯಾಗಿದ್ದ ಜಗದೀಶ್ ಕೃಷ್ಣ ಶೆಟ್ಟಿ ಎಂಬಾತನನ್ನು ಮ್ಯಾನೇಜರ್ ಆಗಿ ನೇಮಿಸಿ ಅಲ್ಲಿನ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದರು. ಆತ ಅಕಿಂತಾ ಆನಂದ ವುಸ್ಲಕರ್ ಎಂಬಾಕೆಯನ್ನು ಅಕೌಟೆಂಟ್ ಮತ್ತು ಬಾಬು ದಳ್ವಾಯಿ ಎಂಬುವನ್ನು ಸಹಾಯಕನನ್ನಾಗಿ ಇಟ್ಟುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ನಡುವೆ ಮೆಸ್ ಬಿಲ್ ನೇರವಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವಂತೆ ವಿಟಿಯು ಆದೇಶಿದ್ದು, ಅದರಂತೆ ಸಚ್ಚಿದಾನಂದ ಶೆಟ್ಟಿ ತನ್ನ ಖಾತೆಗೆ ಲಿಂಕ್ ಆಗಿರುವ ಪಿಒಎಸ್ ಮತ್ತು ಯುಪಿಐ ಮೆಷಿನ್ ಮೆಸ್‌ನಲ್ಲಿ ಅಳವಡಿದ್ದರು. ಆದರೆ ಒಂದನೇ ಆರೋಪಿ ಜಗದೀಶ ಕೃಷ್ಣ ಅದನ್ನು ಬದಲಿಸಿ, ತನ್ನ ಖಾತೆ ಲಿಂಕ್ ಆಗಿರುವ ಮೆಷಿನ್ ಅಳವಡಿಸಿ 6,83,175 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಎರಡನೇ ಆರೋಪಿ ಅಕಿಂತಾ ವಿದ್ಯಾರ್ಥಿಗಳಿಂದ 10,48,337ರೂ. ಮತ್ತು ಮೂರನೇ ಆರೋಪಿ ಬಾಬು ದಳ್ವಾಯಿ 52,622 ರೂ. ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ ಮೆಸ್ ಕೆಲಸಗಾರರಿಗೆ ಸರಿಯಾಗಿ ವೇತನ ನೀಡಲಿಲ್ಲ. ಸಂಸ್ಥೆಯ ಹೆಸರಿನಲ್ಲಿ ಸಾಲವಾಗಿ ದಿನಸಿ ಸಾಮಗ್ರಿಗಳನ್ನು ಪಡೆದಿರುವುದರ ಸಹಿತ 30 ಲಕ್ಷ ರೂ. ನಷ್ಟ ಮಾಡಿದ್ದಾರೆ ಎಂದು ಸಚ್ಚಿದಾನಂದ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News