×
Ad

ಶಾಲೆಗಳಲ್ಲಿ ಮಿನಿ ಭಾರತ ನಿರ್ಮಾಣವಾಗಲಿ: ಡಾ.ಎಂ. ಮೋಹನ್ ಆಳ್ವ

Update: 2025-05-22 21:08 IST

ಮಂಗಳೂರು: ಶಿಕ್ಷಣ ಸಂಸ್ಥೆಗಳು ಆ ಸಂಸ್ಥೆಗಳನ್ನು ಕಟ್ಟಿದವರ ಸಮುದಾಯಕ್ಕೆ ಸೀಮಿತವಾಗಿರಬಾರದು. ಶಾಲೆಗಳು ಯಾವುದೇ ಜಾತಿ ಧರ್ಮ, ಜನಾಂಗಕ್ಕೆ ಸೀಮಿತವಾಗಿರದೆ ಅಲ್ಲಿ ಎಲ್ಲರಿಗೂ ಕಲಿಯಲು ಅವಕಾಶ ಇರಬೇಕು. ಶಾಲೆಗಳನ್ನು ಮಿನಿ ಭಾರತವನ್ನಾಗಿ ರೂಪಿಸಬೇಕಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.

ಅಡ್ಯಾರ್‌ನ ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಗುರುವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್) ಇದರ ವಾರ್ಷಿಕ ಸಮಾವೇಶ, ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಎಲ್ಲರಿಗೂ ಶಿಕ್ಷಣ ಪಡೆಯಲು ಅವಕಾಶ ಇರಬೇಕು. ಅಂತಹ ವಾತಾವರಣವನ್ನು ನಿರ್ಮಿಸಿಕೊಡಬೇಕಾಗಿದೆ. ಭಾರತದಲ್ಲಿ ಹೇಗೆ ನಾನಾ ಜಾತಿ, ಧರ್ಮ, ಭಾಷೆ ಜನಾಂಗದವರು ಇದ್ದಾರೋ ಅದೇ ರೀತಿ ಶಾಲೆಗಳು ಕೂಡಾ ಎಲ್ಲರನ್ನು ಒಳಗೊಂಡ ಮಿನಿ ಭಾರತವಾಗಬೇಕು ಎಂದು ಹೇಳಿದರು.

ಶಾಲೆಗಳು ಸಮಾಜದ ಪ್ರತಿಬಿಂಬವಾಗಬೇಕಾಗಬೇಕು. ಅಲ್ಲಿ ಸಮಾಜವನ್ನು ಕಟ್ಟುವ ಶಿಕ್ಷಣವನ್ನು ನೀಡಬೇಕಾಗಿದೆ. ಸಮಾಜವನ್ನು ಒಡೆಯುವ ಕೆಲಸವಾಗಬಾರದು ಎಂದರು.

ಮಕ್ಕಳಿಗೆ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಹಂತದಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಅಡಿಪಾಯ ಗಟ್ಟಿಯಾದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಅವರಿಗೆ ಶಿಕ್ಷಣ ನೀಡಬೇಕು. ಶಾಲಾ ಆಡಳಿತ ಸಮಿತಿ, ಶಿಕ್ಷಕರು ಅಪ್ ಡೇಟ್ ಆಗಿ ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳಬೇಕಾಗಿದೆ. ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ವ್ಯವಸ್ಥೆ ಒಂದೇ ರೀತಿ ಇರುವುದಿಲ್ಲ.ಇದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಮೀಫ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಾಧನೆಯನ್ನು ಶ್ಲಾಘಿಸಿದ ಡಾ. ಎಂ. ಮೋಹನ್ ಆಳ್ವ ಅವರು ಮೀಫ್‌ನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಕೌಟ್ಸ್, ಗೈಡ್ಸ್ ತರಬೇತಿಗೆ ನೆರವು ನೀಡುವುದಾಗಿ ತಿಳಿಸಿದರು.

ಮೀಫ್‌ನ ಗೌರವಾಧ್ಯಕ್ಷ ಉಮರ್ ಟೀಕೆ ದಿ‌ಕ್ಸೂಚಿ ಭಾಷಣ ಮಾಡಿದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮೀಫ್ ಸಂಸ್ಥೆಯ 2024-25ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ಯೆನೆಪೋಯ ಗ್ರೂಪ್‌ನ ನಿರ್ದೇಶಕ ವೈ ಅಬ್ದುಲ್ಲಾ ಜಾವೇದ್ ಅನಾವರಣಗೊಳಿಸಿದರು.

ಬರಕಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಅಧ್ಯಕ್ಷ ಅಶ್ರಫ್ ಬಜ್ಪೆ ಮತ್ತು ಉಞ್ಞೆ ಹಾಜಿ , ಬಹರೈನ್‌ನ ಸಿನಾನ್ ಝಕರಿಯಾ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಉಪಾಧ್ಯಕ್ಷ ಸುಹೇಲ್ ಅಹ್ಮದ್, ಮಣಿಪಾಲ ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಅಧ್ಯಕ್ಷ ಹರಿಪ್ರಸಾದ್ ರೈ ಅವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಮೀಫ್ ಕೊಡಗು ಚಾಪ್ಟರ್ ಅಧ್ಯಕ್ಷ ಕೆ.ಎ.ಶಾದಲಿ, ಮೀಫ್ ಚಿಕ್ಕಮಗಳೂರು ಚಾಪ್ಟರ್ ಅಧ್ಯಕ್ಷ ಝಮೀರ್ ಅಹ್ಮದ್ , ಮೀಫ್ ಉಪಾಧ್ಯಕ್ಷ ಶಾಬಿಹ್ ಅಹ್ಮದ್ ಕಾಝಿ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ಉಪಸ್ಥಿತರಿದ್ದರು.

ಮೀಫ್ ಶಾಲೆಗಳಲ್ಲಿ ಎಸೆಸೆಲ್ಸಿಯಲ್ಲಿ ಉನ್ನತ ಸಾಧನೆ ಮಾಡಿರುವ ಸುಮಯ್ಯ ನುಹಾ(619), ದಕ್ಷಿಣ್ ಎಸ್. ಸಾಲ್ಯಾನ್ (618), ನಿದಾ ಖದೀಜ ನೂರ್ (617), ದ್ವಿತೀಯ ಪಿಯುಸಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆದ ಪೃಥ್ವಿ ಆಚಾರ್ಯ(585) , ಆಯಿಷಾ (584), ಆಯಿಷಾ ಶಮ್ರಿನ್ (584) ಫರ್ರಾಹತ್ ಎಂ.ಎ( 591), ಮಹೀನ್ ಫಾತಿಮಾ( 590), ಆಯಿಷಾ ಫಲಕ್(563), ಅಲೀಮತ್ ಸಯೀದಾ (556), ನಫಿಯಾ  .ಎನ್(556), ಮೀಫ್ ಎಸೆಸೆಲ್ಸಿ ಕೊಡಗು- ಫಿಝಾ ವಿ(618), ಮೀಫ್ ಎಸೆಸೆಲ್ಸಿ ಚಿಕ್ಕಮಗಳೂರು -ತಹ್ಸೀನ್ ಫಾತಿಮಾ( 597) ಮತ್ತು ಕರ್ನಾಟಕ ಎಸೆಸೆಲ್ಸಿ ಮೊದಲ ಸ್ಥಾನ ಪಡೆದ ಶಿರಸಿಯ ಶಗುಫ್ತಾ ಅಂಜುಮ್(625) ಇವರಿಗೆ ಸ್ಮರಣಿಕೆ, ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಮೀಫ್ ಪೂರ್ವ ವಲಯ ಉಪಾಧ್ಯಕ್ಷ ಮುಸ್ತಫಾ ಸುಳ್ಯ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ ಮತ್ತು ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಫರ್ವೆಝ್ ಅಲಿ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News