ಆರೋಗ್ಯ ಸಂರಕ್ಷಣೆ, ವೈದ್ಯಕೀಯ ಕ್ಷೇತ್ರದ ಮುನ್ನಡೆಯಲ್ಲಿ ಆಧುನಿಕತೆ, ತಂತ್ರಜ್ಞಾನದ ಪಾತ್ರ ಮಹತ್ವದ್ದು: ಡಾ.ಆಝಾದ್ ಮೂಪನ್
ಕೊಣಾಜೆ: ವೈದ್ಯಕೀಯ, ಆರೋಗ್ಯ ಸಂರಕ್ಷಣೆ, ಕಾಳಜಿ ಯ ವಿಷಯದಲ್ಲಿ ಭಾರತ ಪ್ರಾಚೀನ ಪರಂಪರೆಯನ್ನು ಹೊಂದಿದ್ದು, ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಯೋಗ, ಆಯುರ್ವೇದದ ಮೂಲಕ ಇಡೀ ಜಗತ್ತಿಗೇ ಪ್ರಭಾವವನ್ನು ಬೀರಿತ್ತು. ಭವಿಷ್ಯದ ಮೌಲ್ಯಾಧಾರಿತ ಸಮಾಜದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದ ಅಗತ್ಯತೆ ಮತ್ತು ಸವಾಲು ಗಳುಗಳ ಬಗ್ಗೆ ಚಿಂತನೆಗಳು ಅಗತ್ಯ ಎಂದು ಆಸ್ಕರ್ ಡಿಎಂ ಹೆಲ್ತ್ ಕೇರ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಆಝಾದ್ ಮೂಪನ್ ಅವರು ಹೇಳಿದರು.
ಅವರು ಶನಿವಾರ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು.
ಭಾರತದಲ್ಲಿ ಆರಂಭದಲ್ಲಿ ಅಂದರೆ 1835 ಕಲ್ಲತ್ತದಲ್ಲಿ ಮೊದಲ ಮೆಡಿಕಲ್ ಆರಂಭಗೊಂಡು ವೈದ್ಯಕೀಯ ಶಿಕ್ಷಣಕ್ಕೆ ಬುನಾದಿ ಹಾಕಿತು. ಈಗ 701 ಮೆಡಿಕಲ್ ಕಾಲೇಜುಗಳು ನಮ್ಮ ದೇಶದಲ್ಲಿದೆ. ಇಂದು ವೈದ್ಯಕೀಯ ಕ್ಷೇತ್ರ ಹಾಗೂ ಆರೋಗ್ಯದ ಕಾಳಜಿಯಲ್ಲಿ ಆಧುನಿಕತೆ, ತಂತ್ರಜ್ಞಾನದ ಪ್ರಭಾವ ಮಹತ್ತರವಾದುದು ಹಾಗೂ ವೈಧ್ಯಕೀಯ ಶಿಕ್ಷಣ ಕ್ಷೇತ್ರ ದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ ಮತ್ತು ಇದರಲ್ಲಿ ಯುವ ಸಮುದಾಯದ ಪಾತ್ರ ಪ್ರಮುಖವಾದುದು ಎಂದರು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಯೆನೆಪೋಯ ವಿವಿಯ ಕುಲಾಧಿಪತಿ ಡಾ.ಯೆನೆಪೊಯ ಅಬ್ಬುಲ್ಲಾ ಕುಂಞಿ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಎಇ ಟ್ರಸ್ಟನ ನ ಅಧ್ಯಕ್ಷರಾದ ಮೊಹಮ್ಮದ್ ಕುಂಞಿ, ಯನೆಪೊಯ ವಿವಿಯ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ, ಉಪಕುಲಪತಿ ಡಾ.ಬಿ.ಎಚ್.ಶ್ರೀಪತಿ ರಾವ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಪರಿಕ್ಷಾಂಗ ಕುಲಸಚಿವರಾದ ಡಾ.ಬಿ.ಟಿ.ನಂದೀಶ್, ಬಿಒಎಂ ಸದಸ್ಯರಾದ ಯೆನೆಪೋಯ ಅಬ್ದುಲ್ ಜಾವೇದ್ ಹಾಗೂ ವಿವಿಧ ಕೇಂದ್ರಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಶೈಕ್ಷಣಿಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಯೆನೆಪೋಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿಜಯಕುಮಾರ್ ಸ್ವಾಗತಿಸಿದರು. ಡಾ.ಮಲ್ಲಿಕಾ ಶೆಟ್ಟಿ ಹಾಗೂ ಡಾ.ರೋಚೆಲ್ಲೆ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.
ಘಟಿಕೋತ್ಸವದಲ್ಲಿ ಪಿಎಚ್ ಡಿ, ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲಮೋ ಮತ್ತು ವಿವಿಧ ವಿಭಾಗಗಳು ಸೇರಿದಂತೆ ಒಟ್ಟು 2277 ಅಭ್ಯರ್ಥಿಗಳು ಪದವಿಯನ್ನು ಪಡೆದುಕೊಂಡರು. ವಿವಿಧ ಪದವಿ ಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಒಂಭತ್ತು ಮಂದಿ ಚಿನ್ನದ ಪದಕಗಳನ್ನು ಪಡೆದರು.