ವಿಧಾನ ಪರಿಷತ್ ಚುನಾವಣೆ: ನೈರುತ್ಯ ಪದವಿಧರ ಕ್ಷೇತ್ರದಿಂದ ಮುಹಮ್ಮದ್ ತುಂಬೆ ಸ್ಪರ್ಧೆ
ಮಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ ನೈರುತ್ಯ ಪದವಿಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಪಕ್ಷೇತಕ ಅಭ್ಯರ್ಥಿ ಯಾಗಿ ನಿವೃತ್ತ ಶಿಕ್ಷಕ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ ದ.ಕ. ಜಿಲ್ಲಾ ಸ್ಕೌಟ್ ಆಯುಕ್ತ ಬಿ. ಮಹಮ್ಮದ್ ತುಂಬೆ ಸ್ಪರ್ಧಿಸುತ್ತಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜ್ಞಾವಂತ ಹಾಗೂಬುದ್ಧಿವಂತ ಪದವೀಧರರು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಕಳೆದ ಅನೇಕ ವರ್ಷಗಳಿಂದ ಪದವೀಧರರ ವಿವಿಧ ಬೇಡಿಕೆಗಳು ಈಡೇರಿಲ್ಲ. ಅಸಂಖ್ಯಾ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಸಮಾಜದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಸರಕಾರ ಈ ಬಗ್ಗೆ ಯೋಜನೆಗಳನ್ನು ರೂಪಿಸಿದಂತೆ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಬೆಂಬಲಿಸಿದ್ದಲ್ಲಿ ನಿರುದ್ಯೋಗಿ ಪದವಿಧರರ ಆಕಾಂಕ್ಷೆಗಳಿಗೆ ಧ್ವನಿಯಾಗುತ್ತೇನೆ. ಸ್ವ ಉದ್ಯೋಗ ತರಬೇತಿ ಸಂಸ್ಥೆಗಳನ್ನು ಆರಂಭಿಸಲು ಕ್ರಮ ಜರಗಿಸಲಾಗುವುದು. ವಿವಿಧ ವಿವಿಗಳ ವಿದ್ಯಾರ್ಥಿಗಳ ಅಂಕಪಟ್ಟಿ ಸಕಾಲಕ್ಕೆ ಒದಗುವ ರೀತಿಯಲ್ಲಿ ಪ್ರಯತ್ನಿಸಲಾಗುವುದು. ಬಾಕಿ ಉಳಿದ ಹುದ್ದೆಗಳಗೆ ನೇಮಕಾತಿ, ಎನ್‌ಇಪಿ, ಎಸ್‌ಇಪಿ ಗೊಂದಲ ನಿವಾರಣೆಗೆ ಕ್ರಮ, ತತ್ಸಮಾನ ಪದವಿಗಳ ಬಗೆಗಿನ ಗೊಂದಲ ನಿವಾರಿಸಲಾಗುವುದು ಎಂದು ಅವರು ತಿಳಿಸಿದರು.
ಭಾರತ್ ಸ್ಕೌಟ್ ಆ್ಯಂಡ್‌ಗೈಡ್‌ನ ಜಿಲ್ಲಾ ಉಪಾಧ್ಯಕ್ಷ ವಸಂತ್ ರಾವ್, ನಿವೃತ್ತ ಶಿಕ್ಷಕ ರಾಮಕೃಷ್ಣ ರಾವ್, ಪ್ರಮುಖರಾದ ಅಹಮ್ಮದ್ ತ್ವಾಹಾ ತನ್ವೀರ್, ಜುನೈದ್, ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.