ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ ಪುಸ್ತಕ ವಿತರಣೆ
ಮಂಗಳೂರು, ಮೇ 25: ಜಾತಿ, ಧರ್ಮ ಪರಿಗಣಿಸದೆ ಕಿಡ್ನಿ ರೋಗಿಗಳ ಡಯಾಲಿಸಿಸ್‌ಗೆ ಮಾಸಿಕ ಸಹಾಯಧನ, ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆ ಇರುವವರನ್ನು ಗುರುತಿಸಿ ಸಹಾಯಧನ ನೀಡಲಾಗುತ್ತಿದೆ. ಹೀಗೆ ನೆರವು ಪಡೆದ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಿ ಇತರರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್ ಹೇಳಿದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಶನಿವಾರ ಸಂಘದ ಆವರಣದಲ್ಲಿ ನಡೆದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಸೆಸ್ಸೆಎಲ್ಸಿ ಅತ್ಯುತ್ತಮ ಅಂಕ ಗಳಿಸಿದ ಕಸ್ಬಾ ಬೆಂಗರೆಯ ಆಯಿಶಾ ಉನೈಸಾ, ಮರಿಯಂ ಸಬಾ ಹಾಗೂ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ಲೈಫ್ ಸೇವಿಂಗ್ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಮುಹಮ್ಮದ್ ಅಬ್ದುಲ್ ಬಾಶಿತ್ ಇವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯಿಲ್, ಎ.ಎನ್.ಆರ್. ಅನ್ವರ್, ಕೆ.ಎನ್.ಎಚ್. ಇಬ್ರಾಹಿಂ, ಎಸ್.ಎಂ.ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಸಿಇಒ ಅಬ್ದುಲ್ ಲತೀಫ್, ಗುತ್ತಿಗೆದಾರ ಮನೋಹರ್ ಉಪಸ್ಥಿತರಿದ್ದರು. ಹಸನ್ ಫಝಲ್ ಕಿರಾಅತ್ ಪಠಿಸಿದರು.