ಬ್ಯಾರಿ ವೆಬ್‌ಸೈಟ್ ಸಮುದಾಯದ ಮಾಹಿತಿ ಕೇಂದ್ರವಾಗಲಿ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: www.bearyinfo.com ಕೇವಲ ಒಂದು ವೆಬ್‌ಸೈಟ್ ಅಲ್ಲ. ಇದು ಬ್ಯಾರಿ ಸಮುದಾಯದ ಸಂಪರ್ಕ ಸೇತುವಾಗಿ, ಮಾಹಿತಿ ಕೇಂದ್ರವಾಗಿ ರೂಪುಗೊಳ್ಳಬೇಕಿದೆ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಬ್ಯಾರಿ ಸಮುದಾಯದ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಘಟನೆ, ಶಿಕ್ಷಣ, ಸಂಶೋಧನೆಗೆ ಸಂಬಂಧಪಟ್ಟ ಗ್ರಂಥಗಳು, ಪ್ರಬಂಧಗಳು, ಅಗಲಿದ ಮಹನೀಯರ ನೆನಪು, ಸಾಧಕರ ಪರಿಚಯ, ಸಾಧನೆ ಹೀಗೆ ಬ್ಯಾರಿಗಳ ಸಮಗ್ರ ಮಾಹಿತಿಗಳನ್ನು ಒಳಗೊಂಡ ʼಬ್ಯಾರಿ ಇನ್‌ಫೋ ಡಾಟ್‌ಕಾಂʼ ಹೆಸರಿನ ವೆಬ್‌ಸೈಟನ್ನು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಅದಕ್ಕೆ ಪೂರಕವಾಗಿ ನಾವು ಕೂಡ ಹೊಂದಿಕೊಳ್ಳಬೇಕಿದೆ. ಈ ವೆಬ್‌ಸೈಟ್‌ನಿಂದ ಭವಿಷ್ಯದ ಯುವ ಪೀಳಿಗೆಗೆ ಅನುಕೂಲವೂ ಆಗಬೇಕಿದೆ. ಸಾಹಿತಿ, ಸಂಘಟಕರಾದ ಮುಹಮ್ಮದ್ ಕಮ್ಮರಡಿ ಮತ್ತು ಮುಹಮ್ಮದ್ ಕುಳಾಯಿ ಅವರ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಬದ್ಧತೆ, ಪ್ರಾಮಾಣಿಕತೆ, ಪಾರದರ್ಶಕತೆಯೂ ಇದೆ. ಹಾಗಾಗಿ ಈ ವೆಬ್‌ಸೈಟ್ ಯಶಸ್ವಿಯಾಗಲಿದೆ ಎಂದು ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ದಿಕ್ಸೂಚಿ ಭಾಷಣಗೈದ ಬೆಂಗಳೂರು ಟೀಕೇಸ್ ಗ್ರೂಪಿನ ಮುಖ್ಯಸ್ಥ ಉಮರ್ ಟೀಕೆ ಸುಮಾರು 1400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಬ್ಯಾರಿ ಜನಾಂಗವು ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕಳೆದೊಂದು ಶತಮಾನಗಳ ಕಾಲ ನಿದ್ರಾವಸ್ಥೆಯಲ್ಲಿದ್ದ ಬ್ಯಾರಿ ಜನಾಂಗವು ಕಳೆದ 35 ವರ್ಷದಿಂದೀಚೆಗೆ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. 1987ರಲ್ಲಿ ಬೆಂಗಳೂರಿನಲ್ಲಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಸ್ಥಾಪಿಸುವಾಗ ನಿರ್ದಿಷ್ಟ ಗುರಿ ಇರಲಿಲ್ಲ. ಆದರೆ ಆ ಸಂಘಟನೆಯು ಸಮುದಾಯಕ್ಕೆ ಮಾದರಿಯಾಯಿತು ಮತ್ತು ಆ ಬಳಿಕ ಬ್ಯಾರಿ ಆಂದೋಲನವೇ ಸೃಷ್ಟಿಯಾ ಯಿತು. ಅದಕ್ಕೆ ಪೂರಕವಾಗಿ ಇದೀಗ ಈ ವೆಬ್‌ಸೈಟ್ ಕಾರ್ಯಾಚರಿಸಲಿದೆ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ www.bearyinfo.com ಸಮುದಾಯದಲ್ಲಿ ಹೊಸತನಕ್ಕೆ ನಾಂದಿಯಾಗಲಿದೆ. ಇದು ಬ್ಯಾರಿಗಳನ್ನು ಪರಸ್ಪರ ಬೆಸೆಯುವ ಕೊಂಡಿಯಾಗಲಿದೆ ಎಂದು ಉಮರ್ ಟೀಕೆ ಹೇಳಿದರು.
ಸೌದಿ ಅರೇಬಿಯಾದ ಎಕ್‌ಸ್ಪರ್ಟೈಝ್ ಕಾಂಟ್ರಾಕ್ಟಿಂಗ್ ಕಂಪನಿಯ ಉಪಾಧ್ಯಕ್ಷ ಕೆ.ಎಸ್. ಶೇಕ್ ಕರ್ನಿರೆ, ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪನಿಯ ಸಿಇಒ ಬಿ.ಝಕರಿಯ ಜೋಕಟ್ಟೆ, ಮಂಗಳೂರಿನ ಆಝಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್ ಶುಭಹಾರೈಸಿದರು.
ಬೆಂಗಳೂರಿನ ಬ್ಯಾರೀಸ್ ಗ್ರೂಪ್‌ನ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ, ಬೆಂಗಳೂರಿನ ಪ್ರಿಮಿಯರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಓಸಿಯನ್ ಕನ್‌ಸ್ಟಕ್ಷನ್ ಪ್ರೈ.ಲಿ.(ಇಂಡಿಯಾ) ಇದರ ನಿರ್ದೇಶಕ ಇನಾಯತ್ ಅಲಿ ಮುಲ್ಕಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
*ವಿದೇಶದ ಪ್ರತಿನಿಧಿಗಳಾದ ಝಮೀರ್ ಅಬ್ದುರ‌್ರಹ್ಮಾನ್ ಕೆನಡಾ, ಮುಹಮ್ಮದ್ ಹನೀಫ್ ಬಾಲ್ದಬೊಟ್ಟು ಯುನೈಟೆಡ್ ಕಿಂಗ್ಡಮ್, ಸಲ್ಮಾ ಟೀಕೆ ಯುಎಸ್‌ಎ, ಶರ್ಫುದ್ದೀನ್ ಬಿ.ಎಸ್. ಕುವೈತ್, ಹಸನ್ ಇಮಾದುಲ್ಲಾಹ್ ನ್ಯೂಝಿಲ್ಯಾಂಡ್ ವೀಡಿಯೋ ಸಂದೇಶ ನೀಡಿದರು.
ಮುಹಮ್ಮದ್ ಅಖೀಲ್ ಏರ್‌ಲೈನ್ಸ್ ಕಿರಾಅತ್ ಪಠಿಸಿದರು. ಮುಹಮ್ಮದ್ ಅಲಿ ಕಮ್ಮರಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಕುಳಾಯಿ ವಂದಿಸಿದರು.
*www.bearyinfo.com ವೆಬ್‌ಸೈಟಿನ ಲೈಬ್ರರಿ ವಿಭಾಗದಲ್ಲಿ 132 ಬ್ಯಾರಿ ಭಾಷೆಯ ಕೃತಿಗಳು, ಬ್ಯಾರಿಗೆ ಸಂಬಂಧಿ ಸಿದ ಕನ್ನಡ ಮತ್ತು ಇಂಗ್ಲಿಷ್ ಸಂಶೋಧನಾ 13 ಗ್ರಂಥಗಳು, ಬ್ಯಾರಿ ಲೇಖಕರ 50ಕ್ಕೂ ಅಧಿಕ ಕನ್ನಡ ಕೃತಿಗಳು, ಸಂಶೋಧನೆಗೆ ಸಂಬಂಧಪಟ್ಟ ಹಲವಾರು ಲೇಖನಗಳು ಮತ್ತು ಪ್ರಬಂಧಗಳು, ಬ್ಯಾರಿ ಸಂಘಟನೆಗಳು ಪ್ರಕಟಿಸಿದ ವಿಶೇಷಾಂಕಗಳು, 4 ಬ್ಯಾರಿ ಸಾಹಿತ್ಯ ಸಮ್ಮೇಳನ ಮತ್ತು 1 ಬ್ಯಾರಿ ಸಮ್ಮೇಳನಗಳಲ್ಲಿ ಮಂಡಿಸಿದ ಪ್ರಬಂಧಗಳು ಅಡಕವಾಗಿವೆ.
30ಕ್ಕೂ ಅಧಿಕ ಸಂಘಟನೆಗಳ ಪೈಕಿ ಸ್ಥಳೀಯ ಬ್ಯಾರಿ ಸಂಘಟನೆಗಳ ಪರಿಚಯ, ರಾಜ್ಯ ಮಟ್ಟದ ಬ್ಯಾರಿ ಸಂಘಟನೆಗಳ ಪರಿಚಯ, ದುಬೈ, ಅಬುಧಾಬಿ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಒಮನ್ ಹಾಗೂ ಇತರ ವಿದೇಶಗಳಲ್ಲಿರುವ ಬ್ಯಾರಿ ಸಂಘಟನೆಗಳ ಪರಿಚಯ, ಬ್ಯಾರಿಗಳ ಸಂಘಟನೆಗಳ ಪರಿಚಯ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಪರಿಚಯ, ಮೀಫ್‌ಗೆ ಒಳಪಟ್ಟ 140ಕ್ಕೂ ಅಧಿಕ ಶಾಲಾ - ಕಾಲೇಜುಗಳ ವಿವರ, ಬ್ಯಾರಿ ಮಹಿಳಾ ಲೇಖಕಿಯರ ಒಕ್ಕೂಟದ ಪರಿಚಯ, 60ಕ್ಕೂ ಅಧಿಕ ಲೇಖಕಿಯರ ವಿವರ, ಬ್ಯಾರಿ ವಾರ್ತೆ ಮಾಸಿಕದ ಕಳೆದ 8 ವರ್ಷಗಳ ಸಂಪೂರ್ಣ ಪ್ರತಿಗಳು, 50ಕ್ಕೂ ಅಧಿಕ ಬ್ಯಾರಿ ಗಣ್ಯರ ಪರಿಚಯ (ಇಂಗ್ಲಿಷ್‌ನಲ್ಲಿ) ಅಗಲಿದ 120ಕ್ಕೂ ಅಧಿಕ ಬ್ಯಾರಿ ಗಣ್ಯರ ಪರಿಚಯ (ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ), 20ಕ್ಕೂ ಅಧಿಕ ಬ್ಯಾರಿ ಲೇಖಕರ ಪರಿಚಯ, ಬ್ಯಾರಿ ಸಂಗೀತ, ಕಲಾವಿದರ ಒಕ್ಕೂಟದ ಪರಿಚಯ, ರಕ್ತದಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾರಿ ಸಂಘಟನೆಗಳ ಪರಿಚಯವಿದೆ.
*ಬ್ಯಾರಿಗಳು ಸ್ಥಾಪಿಸಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಪರಿಚಯ, ಬ್ಯಾರಿಗಳ ಉದ್ದಿಮೆಗಳ ಪರಿಚಯ, ಬ್ಯಾರಿ ಡಾಕ್ಟರ್, ಇಂಜಿನಿಯರ್, ವಕೀಲರು, ಸಿಎ ಇತರ ಉನ್ನತ ಸೇವೆಯಲ್ಲಿರುವವರ ಮಾಹಿತಿ, ಸ್ಥಳೀಯ ಮತ್ತು ರಾಜ್ಯಮಟ್ಟದ ಬ್ಯಾರಿ ರಾಜಕಾರಣಿಗಳ ಪರಿಚಯ, ಡಾಕ್ಟರೇಟ್ ಮಾಡಿದ ಬ್ಯಾರಿಗಳ ಪರಿಚಯ ಮತ್ತು ಅವರ ಪ್ರಬಂಧಗಳು, ಸ್ಥಳೀಯ, ದೇಶ-ವಿದೇಶಗಳ ಉದ್ಯೋಗ ಮಾಹಿತಿ, ರಕ್ತದಾನಿಗಳ ವಿವರ, ಮೆಡಿಕಲ್ ಹೆಲ್ಪ್‌ಲೈನ್, ಬ್ಯಾರಿ ಭಾಷೆ, ಸಂಸ್ಕೃತಿ ಕುರಿತು ಸಂಶೋಧನೆಗೆ ಸಂಬಂಧಪಟ್ಟ ಲೇಖನಗಳು, ಬ್ಯಾರಿ ಬಿಸಿನೆಸ್ ಡೈರೆಕ್ಟರಿ, ವಿವಾಹ ವೇದಿಕೆ ಇತ್ಯಾದಿ ವಿಷಯವು ವೆಬ್‌ಸೈಟ್‌ಗೆ ಸೇರ್ಪಡೆ ಆಗಲಿದೆ ಎಂದು ಪ್ರಕಟನೆ ತಿಳಿಸಿದೆ.