ಶಿಕ್ಷಣದಿಂದ ಎಲ್ಲವನ್ನು ಜಯಿಸಲು ಸಾಧ್ಯ: ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ
ಮಂಗಳೂರು: ಪ್ರಪಂಚದಲ್ಲಿ ಶಿಕ್ಷಣಕ್ಕಿಂತ ಮಿಗಿಲಾದ ಅಸ್ತ್ರ ಇನ್ನೊಂದಿಲ್ಲ. ಶಿಕ್ಷಣದ ಮೂಲಕ ಪ್ರಪಂಚದಲ್ಲಿ ಎಲ್ಲವನ್ನೂ ಜಯಿಸಲು ಸಾಧ್ಯ ಎಂದು ವಳಚ್ಚಿಲ್ ಕೇಂದ್ರ ಜುಮಾ ಮಸ್ಜಿದ್‌ನ ಖತೀಬ್ ಕೆ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅಭಿಪ್ರಾಯಪಟ್ಟಿದ್ದಾರೆ.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಅನಿ ಚಾರಿಟೇಬಲ್ ಫೌಂಡೇಶನ್ ಆಶ್ರಯದಲ್ಲಿ ರವಿವಾರ ಕಂಕನಾಡಿಯ ಟ್ಯಾಲೆಂಟ್ ಕಾನ್ಪೆರೆನ್ಸ್ ಹಾಲ್‌ನಲ್ಲಿ ನಡೆದ ಟ್ಯಾಲೆಂಟ್ ಎಕ್ಸಲೆನ್ಸ್ ಅವಾರ್ಡ್ ಮತ್ತು ಮದ್ರಸ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ದುಅ ನೆರವೇರಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಇವತ್ತು ಯುವಜನರು ಹಸಿವಿನಿಂದ ಬಳಲುತ್ತಿದ್ದಾರೆ. ಹಸಿವು ಅಂದರೆ ಹೊಟ್ಟೆಯ ಹಸಿವು ಮಾತ್ರ ಅಲ್ಲ ನಾನಾ ರೀತಿಯ ಹಸಿವುಗಳನ್ನು ತಣಿಸಲು ಹೆಣಗಾಡುವ ಪರಿಸ್ಥಿತಿ ಇದೆ ಎಂದರು.
ಗಾಂಜಾ, ಅಫೀಮ್ ಮತ್ತಿತರ ಅಮಲು ಪದಾರ್ಥಗಳ ಸೇವನೆಯ ದುಶ್ಚಟಗಳಿಗೆ ಯುವಜನರು ಬಲಿಯಾಗುತ್ತಿರುವುದು, ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಬದುಕನ್ನು ಹಾಳು ಮಾಡುತ್ತಿದ್ದಾರೆ. ಧರ್ಮದ ಲೇಬಲ್‌ನಲ್ಲಿ ಅನಾಚಾರ ನಡೆಯುತ್ತಿರುವ ಇಂತಹ ಕಾಲ ಕಾಲಘಟ್ಟದಲ್ಲಿ ಸಮಾಜದ ಹಿತ ಚಿಂತನೆಗೆ ಅವಕಾಶವಿಲ್ಲದ ಪರಿಸ್ಥಿತಿ ಇದೆ. ಮಕ್ಕಳಿಗೆ ಭವಿಷ್ಯ ರೂಪಿಸಲು ಉತ್ತಮ ಶಿಕ್ಷಣ ಕೊಡಬೇಕೆಂಬ ಪ್ರಜ್ಞೆ ಕೂಡಾ ಹೆತ್ತವರಿಗೆ ಇಲ್ಲದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಸ್ಲಿಮ್ ಸಮುದಾಯದವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಉದ್ದೇಶವನ್ನಿಟ್ಟುಕೊಂಡು 20 ವರ್ಷಗಳ ಹಿಂದೆ ಉದಯಿಸಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ತನ್ನ ನಿರಂತರ ಚಟುವಟಿಕೆ ಗಳ ಮೂಲಕ ಇಂದು ಹೆಮ್ಮರವಾಗಿ ಬೆಳೆದಿದೆ. ಮುಸ್ಲಿಮ್ ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ಎಲ್ಲ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಮಾದರಿ ಸಂಘಟನೆಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಮುಸ್ಲಿಮ್ ಜಮಾಅತ್‌ನ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸಅದಿ ಖತಾರ್ ಅವರು ಮಾತನಾಡಿ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಮ್ ಸಮುದಾಯದ ಮಹನೀಯರಲ್ಲಿ ಆನೇಕ ಮಂದಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆದವರಾಗಿದ್ದರು. ಈಗ ಧಾರ್ಮಿಕ ಶಿಕ್ಷಣದ ಕೊರತೆಯಿಂದ ಯುವ ಜನರು ದಾರಿ ತಪ್ಪುತ್ತಿದ್ದಾರೆ. ನಮ್ಮ ವಿಜಯಕ್ಕೆ ಎರಡೂ ರೀತಿಯ ಶಿಕ್ಷಣ ಅಗತ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಅಹ್ಮದ್ ಕೆ.ಬಿ. ಮಾತನಾಡಿ ಇವತ್ತು ನಗರ ಪ್ರದೇಶಗಳ ಮಕ್ಕಳಿಗಿಂತ ಗ್ರಾಮೀಣ ಪ್ರದೇಶಗಳ ಶಾಲೆ ಮತ್ತು ಮದ್ರಸಗಳ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೀಟ್‌ನ ಟಾಪರ್ ಮುಹಮ್ಮದ್ ಅನ್ವರ್, ಸಿಇಟಿ ಟಾಪರ್ ನಿಹಾರ್ ಎಸ್.ಆರ್, ಎಸ್ಸೆಸೆಲ್ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 12, ದ್ವಿತೀಯ ಪಿಯುಸಿಯ 14 ವಿದ್ಯಾರ್ಥಿಗಳಿಗೆ, ಮದ್ರಸದ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 12, ಏಳನೇ 10, ಹತ್ತನೇ 8 ಮತ್ತು ಪ್ಲಸ್ ಟುನಲ್ಲಿ ಗರಿಷ್ಠ ಅಂಕಗಳನ್ನು ಪಡೆ 5 ಮಂದಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ವರ್ಷದ ಬ್ಯಾರಿ ಪ್ರಶಸ್ತಿ ಪುರಸ್ಕೃತ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್ ಅವರನ್ನು ಇದೇ ಸಂದರ್ಭದಲ್ಲಿ ಟಿಆರ್‌ಎಫ್ ವತಿಯಿಂದ ಸನ್ಮಾನಿಸಲಾಯಿತು.
ಕಾಟಿಪಳ್ಳ ಮಿಸ್ಬಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಅಧ್ಯಕ್ಷ ಮುಮ್ತಾಝ್ ಅಲಿ, ಕೃಷ್ಣಾಪುರ, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಅಧ್ಯಕ್ಷ ಎಂ.ಎಚ್.ಮೊಯ್ದಿನ್ ಹಾಜಿ ಅಡ್ಡೂರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮೋಟಿವೇಶನಲ್ ಟ್ರೈನರ್ ಮತ್ತು ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡಿದರು.
ಮೀಫ್‌ನ ಕೋಶಾಧಿಕಾರಿ ನಿಸಾರ್ ಫಕೀರ್ ಮೊಹಮ್ಮದ್, ನಗದು ಪುರಸ್ಕಾರದ ಪ್ರಾಯೋಜಕತ್ವ ವಹಿಸಿದ್ದ ಮಂಗಳೂರು ಅನಿ ಟ್ರೇಡಿಂಗ್ ಆ್ಯಂಡ್ ಕಂಪೆನಿಯ ಅಧ್ಯಕ್ಷ ಲತೀಫ್ ಗುರುಪುರ ಇವರ ಸುಪುತ್ರ ಮುಹಮ್ಮದ್ ರಿಝ್ವಿ , ಮ್ಯಾನೇಜರ್ ನೌಶಾದ್ ಉಪಸ್ಥಿತರಿದ್ದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ನಝೀರ್ ಸರಳಿಕಟ್ಟೆ ವಂದಿಸಿದರು. ಮುಹಮ್ಮದ್ ನಾಝಿಕ್ ಬಜಾಲ್ ಮತ್ತು ನಕಾಶ್ ಬಾಂಬಿಲ ಕಾರ್ಯಕ್ರಮ ನಿರೂಪಿಸಿದರು.