ಮಂಗಳೂರು ಪತ್ರಿಕಾ ಭವನದಲ್ಲಿ ದಿ.ಮನೋಹರ ಪ್ರಸಾದ್ ಸಂಸ್ಮರಣೆ ಕಾರ್ಯಕ್ರಮ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ದಿ.ಮನೋಹರ ಪ್ರಸಾದ್ ಅವರ ಸಂಸ್ಮರಣೆ ಕಾರ್ಯಕ್ರಮ ಶನಿವಾರ ಬೆಳಗ್ಗೆ ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ,. “ಮನೋಹರ್ ಪ್ರಸಾದ್ ನಾಡು ಕಂಡ ಅದ್ಭುತ ಪತ್ರಕರ್ತ. ಅಪಾರವಾದ ಜ್ಞಾನ ಭಂಡಾರ ಅವರಲ್ಲಿತ್ತು. ಅವರ ನೆನಪಿನಲ್ಲಿ ಹಿರಿಯ ಪತ್ರಕರ್ತ ನಂದಕುಮಾರ್ ಅವರು ಮನೋಹರ್ ಪ್ರಸಾದ್ ಬರೆದಿರುವ “ನಮ್ಮೂರು' ಲೇಖನ ಸರಣಿಯ ಭಾಷಾಂತರ ಕಾರ್ಯಕ್ಕೆ ಇಳಿದಿರುವುದು ಖುಷಿಯ ವಿಚಾರ“ ಎಂದರು.
ನಂದಕುಮಾರ್ ಅವರು ಮನೋಹರ್ ಪ್ರಸಾದ್ ಅವರ ಜೊತೆಗಿನ ಸ್ನೇಹವನ್ನು ಮೆಲುಕು ಹಾಕಿಕೊಂಡರು. ಮನೋಹರ್ ಪ್ರಸಾದ್ 10 ವರ್ಷಗಳ ಕಾಲ ಪ್ರತೀ ವಾರ ಸುಮಾರು 520 ಎಪಿಸೋಡ್ ಗಳನ್ನು 'ನಮ್ಮೂರು' ಕಾಲಂ ಅನ್ನು ಪತ್ರಿಕೆಗೆ ಬರೆದಿದ್ದರು. ಈ ಮೂಲಕ ತುಳುನಾಡಿನ ಆಹಾರ, ವೈವಿಧ್ಯ, ಪದ್ಧತಿ, ಸಂಸ್ಕೃತಿಯನ್ನು ಪರಿಚಯ ಮಾಡಿದ್ದರು. ಇದನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿ ಮುಂದಿನ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತಾಡಿ, ಮನೋಹರ್ ಪ್ರಸಾದ್ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದವರು. ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಪತ್ರಕರ್ತರಾಗಿದ್ದ ಮನೋಹರ್ ಅವರು ಬಹಳ ಎತ್ತರಕ್ಕೆ ಬೆಳೆದಿದ್ದರು. ಆ ಕಾಲದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಸಾಧನೆ ಮಾಡಿದ್ದ ಅವರು ಇಂದಿನ ಮಕ್ಕಳಿಗೆ ಮಾದರಿಯಾದವರು. ಹಿಂದೆ ತಂತ್ರಜ್ಞಾನ ಇರಲಿಲ್ಲ, ಈಗ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಇದನ್ನು ಮಕ್ಕಳು ಅರಿತುಕೊಳ್ಳಬೇಕು. ಮನೋಹರ್ ಪ್ರಸಾದ್ ರನ್ನು ಅರ್ಥ ಮಾಡಿಕೊಳ್ಳಬೇಕು ಇದರಿಂದ ಜೀವನದಲ್ಲಿ ಮೇಲೆ ಬರಲು ಸಾಧ್ಯ ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ ನುಡಿನಮನ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಜಗನ್ನಾಥ ಶೆಟ್ಟಿ ಬಾಳ, ಸಚಿತಾ ನಂದಗೋಪಾಲ್, ಮಾಧವ ಸುವರ್ಣ ಭಾಗವಹಿಸಿದ್ದರು.
ಪತ್ರಕರ್ತರಾದ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಬಿ.ಎನ್. ವಂದಿಸಿದರು.