ಮೂರಲ್ಲಿ ಒಂದು ಕೇಸ್ ಯಾಕೆ ಎನ್‌ಐಎಗೆ ಎಲ್ಲವನ್ನು ಕೊಡಿ: ಅಡ್ವಕೇಟ್ ಎಸ್. ಬಾಲನ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರು ಕೊಲೆ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಲಿ. ಕೇವಲ ಒಂದು ಪ್ರಕರಣ ನೀಡಿರುವುದು ಸರಿಯಲ್ಲ ಎಂದು ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ ಇದರ ಅಧ್ಯಕ್ಷ ಅಡ್ವಕೇಟ್ ಎಸ್. ಬಾಲನ್ ಹೇಳಿದ್ದಾರೆ.
ನಗರದ ಓಶಿಯನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶೆಡ್ಯೂಲ್ ಅಫೆನ್ಸ್‌ನ್ನು ಬಿಟ್ಟು ಉಳಿದ ಪ್ರಕರಣವನ್ನು ತನಿಖೆ ನಡೆಸುವ ಅಧಿಕಾರ ಎನ್‌ಐಎಗೆ ಇಲ್ಲ . ಯಾವುದೇ ಪ್ರಕರಣವನ್ನು ವರ್ಗಾಯಿಸಿದರೆ ಸಿಬಿಐಗೆ ತನಿಖೆ ಮಾಡುವ ಅಧಿಕಾರ ಇದೆ ಎಂದು ತಿಳಿಸಿದರು.
ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದ ಕೊಲೆ ಮಾಡಲಾಗಿದ್ದರೆ ಯುಎಪಿಎ ಕಾಯ್ದೆಯನ್ವಯ ಪ್ರಕರಣ ದಾಖಲಿಸಬೇಕು, ಇಲ್ಲವೇ ಇರುವ ಕಾನೂನಿಗೆ ತಿದ್ದುಪಡಿ ತರಬೇಕು. ಆಗ ಮಾತ್ರ ಎಲ್ಲ ರೀತಿಯ ಕೋಮು ಆಧಾರಿತ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹತ್ಯಾ ಪ್ರಕರಣಗಳ ಬಗ್ಗೆ ಸತ್ಯಶೋಧನೆ ಎರಡು ದಿನಗಳಿಂದ ನಡೆಯತ್ತಿದ್ದು, ಸಮಗ್ರ ಮಾಹಿತಿ ಕಲೆ ಹಾಕಿ ವರದಿ ಸಿದ್ದಪಡಿಸಲಾಗುವುದು. ಸರಕಾರಕ್ಕೂ ವರದಿ ಸಲ್ಲಿಸಲಾಗುವುದು ಮತ್ತು ಮಾಧ್ಯಮಗಳಿಗೂ ಬಿಡುಗಡೆಗೊಳಿಸಲಾಗುವುದು ಎಂದು ನುಡಿದರು.
ದ.ಕ.ಜಿಲ್ಲೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಪ್ರಕರಣ ವೈಯಕ್ತಿಕ ಟಾರ್ಗೆಟೆಡ್ ಹತ್ಯೆಯಾದರೆ, ಅಶ್ರಫ್ ಹಾಗೂ ಅಬ್ದುಲ್ ರಹ್ಮಾನ್ ಕೊಲೆ ಸಮುದಾಯ ಟಾರ್ಗೆಟೆಡ್ ಆಗಿದೆ ಎಂದು ಅಭಿಪ್ರಾಯಪಟ್ಟ ಬಾಲನ್, ತಮ್ಮ ಸಂಘಟನೆಯ ವತಿಯಿಂದ ನಡೆಸುವ ಸತ್ಯಶೋಧನಾ ಸಮಿತಿಯು ಕೊಳ್ತಮಜಲಿನಲ್ಲಿ ಹತ್ಯೆಯಾಗಿರುವ ಅಬ್ದುಲ್ ರಹ್ಮಾನ್ ಕುಟುಂಬದವರನ್ನು ಮಾತನಾಡಿಸಿದೆ. ಈ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ಚೇತರಿಸಿ ಕೊಳ್ಳುತ್ತಿರುವ ಖಲಂದರ್ ಶಾಫಿ ಅವರನ್ನು ಮಾತನಾಡಿಸಿಲ್ಲ. ಸುಹಾಸ್ ಶೆಟ್ಟಿ ಕುಟುಂಬದವರ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡದಲ್ಲಿ ಕೋಮು ಸಂಘರ್ಷ ನಿಗ್ರಹಕ್ಕೆ ರಾಜ್ಯ ಸರ್ಕಾರ ನೂತನವಾಗಿ ರಚನೆ ಮಾಡಿರುವ ವಿಶೇಷ ಕಾರ್ಯಪಡೆಗೆ ಪೂರಕ ಕಾನೂನು ಇಲ್ಲದಿರುವುದರಿಂದ ಈ ಕಾರ್ಯಪಡೆ ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘರ್ಷ ನಿಗ್ರಹಕ್ಕಾಗಿ ‘ಆ್ಯಂಟಿ ಕಮ್ಯೂನಲ್ ಲಾ’ ಮಾಡುವುದಾಗಿ ಹೇಳಲಾಗಿದ್ದರೂ ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇಂಥ ಸ್ಪಷ್ಟ, ಪೂರಕ ಕಾನೂನು ಇಲ್ಲದಿದ್ದರೆ ವಿಶೇಷ ಕಾರ್ಯಪಡೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕಾನೂನೇ ದುರ್ಬಲವಾಗಿದೆ: ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯಲ್ಲಿ ಸೆಕ್ಷನ್ 173 ಸೇರಿಸಿ ಈ ಕಾನೂನನ್ನು ದುರ್ಬಲಗೊಳಿಸಿದ್ದರಿಂದಲೇ ಕೋಮು ದ್ವೇಷ ಭಾಷಣ ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ತಡೆ ಸಿಗುತ್ತಿದೆ ಎಂದು ಹೇಳಿದ ಬಾಲನ್, ಈ ಬಗ್ಗೆ ಕರ್ನಾಟಕದ ಕಾನೂನಿಗೆ ಸೂಕ್ತ ತಿದ್ದುಪಡಿ ತಂದರೆ ದ್ವೇಷ ಭಾಷಣ ಮಾಡುವವರಿಗೆ ಸೂಕ್ತ ಶಿಕ್ಷೆ ಸಿಗಬಹುದು ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇದೆ ಎಂಬ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಕೊಲೆ ಯಾರು ಮಾಡಿದ್ದರು ಅದು ತಪ್ಪು. ಪ್ರಕರಣದಲ್ಲಿ ಪಿಎಫ್‌ಐ ಸದಸ್ಯರು ಭಾಗಿಯಾಗಿದ್ದರೆ ಅದು ಕೂಡಾ ತನಿಖೆಯಾಗಲಿ ಎಂದು ಹೇಳಿದರು.
ಪಿಎಫ್‌ಐ ಬ್ಯಾನ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರವು ಪಿಎಫ್‌ಐಯನ್ನು ಐಸಿಸ್, ಅಲ್‌ಖೈದಾಗಳ ರೀತಿಯಲ್ಲಿ ಉಗ್ರ ಚಟುವಟಿಕೆ ಸಂಘಟನೆಯೆಂದು ವ್ಯಾಖ್ಯಾನಿಸಿ ಬ್ಯಾನ್ ಮಾಡಿಲ್ಲ. ಕಾನೂನು ಬಾಹಿರ ಸಂಘಟನೆ ಎಂಬುದಾಗಿ ಪಿಎಫ್‌ಐನ್ನು ಬ್ಯಾನ್ ಮಾಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಖಾನ್, ರಾಜ್ಯ ಉಪಾಧ್ಯಕ್ಷ ಜಯರಾಮ್, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್, ಸಮಿತಿ ಸದಸ್ಯ ಅಸ್ಮ, ದಲಿತ ಹೋರಾಟಗಾರ ಅಂಗಡಿ ಚಂದ್ರು ಉಪಸ್ಥಿತರಿದ್ದರು.