×
Ad

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ದಂಡ: ಮಂಗಳೂರು ಪೊಲೀಸ್ ಕಮಿಷನರ್

Update: 2025-06-19 20:01 IST

ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಜೂ.19: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಕೆಲವು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರ ಪರಿಣಾಮ ಕುಟುಂಬ ಮತ್ತು ಅವಲಂಭಿತರ ಮೇಲೆ ಪ್ರಭಾವ ಬಿದ್ದು ದು:ಖ ಅನುಭವಿಸುತ್ತಾರೆ.

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯ್ದೆ ಕಲಂ 185ರ ಅನ್ವಯ ಪ್ರಕರಣ ದಾಖಲಿಸಿ 10,000ರೂ. ವರೆಗೆ ದಂಡ ಪಾವತಿಸಬೇಕಾಗುತ್ತದೆ. ಅತೀವೇಗದಿಂದ ವಾಹನ ಚಲಾಯಿಸಿದರೆ ಭಾರತೀಯ ಮೋಟಾರು ವಾಹನ ಕಾಯ್ದೆ ಕಲಂ 183ರ ಅನ್ವಯ ಪ್ರಕರಣ ದಾಖಲಿಸಿ 2/3/ಎಲ್‌ಎಂವಿ ವಾಹನಗಳಿಗೆ 1,000 ರೂ., ಎಚ್‌ಎಂವಿ /ಎಚ್‌ಜಿವಿ/ಇತರ ವಾಹನಗಳಿಗೆ 2,000 ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವರ್ಷ ರಸ್ತೆ ಅಪಘಾತದಲ್ಲಿ 75 ಮಂದಿ ಮೃತ್ಯು

ಈ ವರ್ಷದಲ್ಲಿ ಈವರೆಗೆ ನಡೆದ ರಸ್ತೆ ಅಪಘಾತದಲ್ಲಿ 75 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಸುಮಾರು 70 ಅಪಘಾತಗಳು ಅಮಿತ ವೇಗದಲ್ಲಿ ವಾಹನ ಚಲಾವಣೆ, ದುಡುಕುತನ ಮತ್ತು ನಿರ್ಲಕ್ಷ್ಯವೇ ಕಾರಣ ವಾಗಿದೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ಸುಮಾರು 25ರಿಂದ 30 ವರ್ಷ ವಯಸ್ಸಿನವರೇ ಅಧಿಕ ಮಂದಿ ಇದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News