×
Ad

ಭತ್ತದ ಕೃಷಿ ಬಗ್ಗೆ ಜಾಗೃತಿ ಅಗತ್ಯ: ಜಯಲಕ್ಷ್ಮೀ

Update: 2025-07-06 18:06 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಮೂಲಕ ಭತ್ತದ ಕೃಷಿಯನ್ನು ಉಳಿಸಿಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಉಪ ಕಾರ್ಯ ದರ್ಶಿ ಜಯಲಕ್ಷ್ಮೀ ಕೆಎಎಸ್ ತಿಳಿಸಿದ್ದಾರೆ.

ಪುತ್ತಿಗೆ ಗುತ್ತು ಕಡಂದಲೆ ಪರಾರಿ ಮನೆಯ ಭತ್ತದ ಗದ್ದೆಯಲ್ಲಿ ರವಿವಾರ ದ.ಕ ಜಿಲ್ಲಾ ವಾರ್ತಾ ಇಲಾಖೆ, ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು, ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ , ಲಯನ್ಸ್ ಕ್ಲಬ್ ಕಡಂದಲೆ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಕಿನ್ನಿಗೋಳಿ, ಮುಲ್ಕಿ ಮತ್ತು ಮೂಡಬಿದ್ರೆ ಪತ್ರಕರ್ತರ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ನೇಜಿ ನೆಡುವ ಪ್ರಾತ್ಯಕ್ಷಿಕೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ, ದೇಶಕ್ಕೆ ಅನ್ನ ನೀಡುವ ರೈತರಿಗೆ ಅವರ ಕೃಷಿ ಕೆಲಸ ಕಾರ್ಯಗಳ ಬಗ್ಗೆ ಆಸಕ್ತಿ ಹಾಗೂ ಅದಕ್ಕೆ ಹೊಂದಿಕೊಂಡೆ ಅವರ ಬದುಕು ಇರುತ್ತದೆ. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆಯ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಈ ರೀತಿಯ ಪ್ರಾತ್ಯಕ್ಷಿಕೆಯ ಅಗತ್ಯವಿದೆ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬಂತೆ ಕೃಷಿಯ ಬಗ್ಗೆ ಹಿರಿಯ ಮೂಲಕ ಕಿರಿಯರಿಗೆ ಅವರ ಅನುಭವದೊರೆತಾಗ ಕೃಷಿ ಪರಂಪರೆ ಉಳಿಯುತ್ತದೆ ಎಂದರು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿಯವರು ಮಾತನಾಡುತ್ತಾ, ಹಲವು ಸಮಸ್ಯೆ ಸವಾಲುಗಳ ನಡುವೆ ಕೃಷಿಕರು ಬದುಕುತ್ತಿದ್ದಾರೆ. ಈ ಸಂದರ್ಭ ರೈತರಿಗೆ ಕೇಂದ್ರ ಸರಕಾರದ ಬೆಳೆ ವಿಮೆ ಯೋಜನೆಯ ಪ್ರಯೋಜನ ಭತ್ತದ ಕೃಷಿಕರಿಗೂ ದೊರೆಯ ಬೇಕಾಗಿದೆ. ಕೃಷಿ ಗದ್ದೆಗಳ ನಡುವಿನ ಸಂಪರ್ಕ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಗ್ರಾಮೀಣ ಭಾಗದ ಕೃಷಿಕರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಇನ್ನಷ್ಟು ಗಮನಹರಿ ಸಬೇಕಾದ ಅಗತ್ಯವಿದೆ. ಈ ನಡುವೆ ವಿದ್ಯಾರ್ಥಿ ಗಳಲ್ಲಿ ಭತ್ತದ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೊಡಗಿಸಿ ಕೊಂಡ ಸಂಸ್ಥೆ ಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು.

ಈ ಸಂದರ್ಭ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಸುಚರಿತ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಡಂದಲೆ ಪಾಲಡ್ಕ ಪಂಚಾಯತ್ ಸದಸ್ಯ ರಂಜಿತ್ ಭಂಡಾರಿ, ದಿನೇಶ್ ಕೆ, ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಶೆಟ್ಟಿ, ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ವಿಕಾಸ್ ಕೊಟ್ಯಾನ್, ಖಜಾಂಚಿ ರಾಜೇಶ್ ಸೀತಾರಾಮ್, ಸದಸ್ಯರಾದ ಪ್ರಕಾಶ್ ಆಚಾರ್ಯ, ಗೀತಾ ಬಿ ರೈ,ಸಹನ ಆಳ್ವ, ಮಮತಾ ಆಚಾರ್ಯ, ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ಅಧ್ಯಕ್ಷ ಸುಭೋದ್ ದಾಸ್, ಕಾರ್ಯದರ್ಶಿ ಕಿರಣ್ ಪ್ರಸಾದ್ ರೈ,ಖಜಾಂಚಿ ನವೀನ್ ಕುಮಾರ್ ಇಡ್ಯಾಲಯನ್ಸ್ ಸ್ಕೂಲ್ ಕಡಂದಲೆಯ ಶಿಕ್ಷಕಿ ಜಯಲಕ್ಷ್ಮಿ, ಪ್ರಗತಿಪರ ಕೃಷಿಕರಾದ ಸುಖೇಶ್ ಪೂಜಾರಿ, ಅಶ್ವಿಲ್ ಕಾರ್ಡೋಜ, ಕೌಶಿಕ್ ಹೆಗ್ಡೆ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಮೋಹನ್ ಶೆಟ್ಟಿ, ಸುಚಿವೃತ್ ಶೆಟ್ಟಿ ,ವಿಭಾ ಶ್ರೀನಿವಾಸ ನಾಯಕ್, ವರುಣ್ ರೈ ಮೊದಲಾದವರು ಉಪಸ್ಥಿತರಿದ್ದರು.

ಪುತ್ತಿಗೆ ಗುತ್ತುಪರಾರಿ ಕುಟುಂಬದ ಯಜಮಾನ ಸಂತೋಷ್ ಕುಮಾರ್ ಶೆಟ್ಟಿಯವರ ಪ್ರಾರ್ಥನೆ ನೆರವೇರಿಸಿದ ಬಳಿಕ ಬಾಕಿಮಾರು ಗದ್ದೆಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ರೋಟರಿ ಸದಸ್ಯರು ಕಡಂದಲೆ ಕುಟುಂಬದ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ಯಲ್ಲಿ ಪಾಲ್ಗೊಂಡರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News